ಬೆಂಗಳೂರು,ಜು.7:
ಅಧಿಕಾರ ಹಸ್ತಾಂತರ ಕುರಿತಂತೆ ಕಾಂಗ್ರೆಸ್ ನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಯಂತ್ರಕ್ಕೆ ಚುರುಕು ನೀಡುವ ಹೆಸರಿನಲ್ಲಿ ಮಂತ್ರಿಗಳ ಸಾಧನೆಯ ಸಮೀಕ್ಷೆ ಆರಂಭಿಸಿದ್ದಾರೆ.
ಈ ಮೂಲಕ ಸದ್ಯದಲ್ಲೇ ನಡೆಯಲಿದೆ ಎನ್ನಲಾಗುತ್ತಿರುವ ಸಂಪುಟ ಪುನಾರಚನೆ ಸಮಯದಲ್ಲಿ ಯಾರನ್ನು ಕೈ ಬಿಡಲಾಗುತ್ತದೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸ ತೊಡಗಿದ್ದಾರೆ ಈ ಮೂಲಕ ಶಾಸಕರನ್ನು ತಮ್ಮ ಆಪ್ತ ವಲಯದಲ್ಲಿ ಗಟ್ಟಿಯಾಗಿ ಇಟ್ಟುಕೊಳ್ಳುವ ಮೂಲಕ ಅಗತ್ಯವಿದ್ದರೆ ಬಲಾಬಲ ಪ್ರದರ್ಶನಕ್ಕೆ ಮುಂದಾಗಲು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆಯಲ್ಲಿ ಅಧಿಕಾರ ಹಂಚಿಕೆ ಸೂತ್ರದ ಒಪ್ಪಂದ ಜಾರಿಗೊಳಿಸಲು ಮುಂದಾಗಿರುವ ಹೈಕಮಾಂಡ್ ಸದ್ದಿಲ್ಲದೆ ಶಾಸಕರ ಅಭಿಪ್ರಾಯ ಆಲಿಸುತ್ತಿದೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ, ಮಂತ್ರಿಗಳು ತಮ್ಮ ಅಭಿಪ್ರಾಯಗಳಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಪಡಿಸುವ ಹೆಸರಿನಲ್ಲಿ ಸಭೆ ನಡೆಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲ ಈ ಸಭೆ ನಡೆಸುತ್ತಿದ್ದು ಶಾಸಕರ ಅಹವಾಲು ಕೇಳುವ ಜೊತೆ ಜೊತೆಗೆ ನಾಯಕತ್ವ ಬದಲಾವಣೆ ಕುರಿತಂತೆಯೂ ಕೂಡ ಮಾಹಿತಿಯ ಸಂಗ್ರಹಿಸುತ್ತಿದ್ದಾರೆ.
ಈಗಾಗಲೇ 40 ಮಂದಿ ಶಾಸಕರ ಅಭಿಪ್ರಾಯ ಆಲಿಸಿ ಹೈಕಮಾಂಡ್ ಗೆ ವರದಿ ನೀಡಿರುವ ಅವರು ಉಳಿದ ಶಾಸಕರ ಅಭಿಪ್ರಾಯ ಪಾಲಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ
ಸುರ್ಜೇವಾಲ 3 ದಿನಗಳ ಕಾಲ ರಾಜ್ಯದಲ್ಲಿ ಇರಲಿದ್ದಾರೆ. ಈ ಮೂರು ದಿನಗಳ ಕಾಲ ಅವರು ಸರಣಿಯಾಗಿ ಸಭೆಗಳನ್ನು ನಡೆಸಲಿದ್ದಾರೆ. ಒಟ್ಟು 61 ಶಾಸಕರ ಅಭಿಪ್ರಾಯಗಳನ್ನು ಅವರು ಸಂಗ್ರಹಿಸಲಿದ್ದಾರೆ. ಕಲಬುರಗಿ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ ಜಿಲ್ಲೆಗಳ ಶಾಸಕರ ಜೊತೆಗೆ ಅವರು ಮಾತುಕತೆ ನಡೆಸಲಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಕೆಲಸ ಕಾರ್ಯ ಮಾಡಿದ್ದಾರೆ. ಭವಿಷ್ಯದ ಯೋಜನೆಗಳು ಏನೇನು, ಕ್ಷೇತ್ರದಲ್ಲಿ ಕೆಲಸ ಮಾಡಲು ಇರುವ ಅಡ್ಡಿಗಳೇನು ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಅಲ್ಲದೆ ಕೆಲವು ಶಾಸಕರು ಸಚಿವರುಗಳ ಬಗ್ಗೆಯೂ ನೋವು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರುಗಳ ಸ್ಪಂದನೆ ಯಾವ ರೀತಿಯಲ್ಲಿ ಇದೆ? ಅಧಿಕಾರಿಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂಬ ಬಗ್ಗೆಯೂ ಅವರು ಮಾಹಿತಿಯನ್ನು ಸಂಗ್ರಹ ಮಾಡಲಿದ್ದಾರೆ.
ಪರಾಮರ್ಶೆ:
ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ ಆರಂಭಿಸಿದ್ದಾರೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಆರ್ಥಿಕ ಇಲಾಖೆ, ಗೃಹ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಉಳಿದಿರುವ ಇಲಾಖೆಗಳ ಬಗ್ಗೆ ನಾಳೆಯೂ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳ ಮತ್ತು ಭರವಸೆಗಳ ಅನುಷ್ಠಾನ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನ ಮತ್ತು ಅದರ ವೆಚ್ಚ, ಬಾಕಿ ಯೋಜನೆಗಳ ಅಧಿಸೂಚನೆಗಳು, ಅನುದಾನದ ಲಭ್ಯತೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಹಳಷ್ಟು ಇಲಾಖೆಗಳಲ್ಲಿ ಬಜೆಟ್ ಯೋಜನೆಗಳು ಈವರೆಗೂ ಅನುಷ್ಠಾನಗೊಳ್ಳದೆ ನನೆಗುದಿಗೆ ಬಿದ್ದಿವೆ. ಪ್ರತಿಯೊಂದಕ್ಕೂ ಅನುದಾನದ ಕೊರತೆಯ ನೆಪ ಹೇಳಿ ಅಧಿಕಾರಿಗಳು ಉಡಾಫೆ ನಡವಳಿಕೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳಿದ್ದವು.
ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಇಲಾಖೆಯ ಜೊತೆ ಪ್ರತ್ಯೇಕ ಮಾತುಕತೆ ನಡೆಸುವ ಮೂಲಕ ಅದರಲ್ಲೂ ತಲಾ ಒಂದು ಗಂಟೆ ಸುದೀರ್ಘ ಅವಧಿಯ ಸಮಾಲೋಚನೆ ಮೂಲಕ ಇಲಾಖೆಯ ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಿದ್ದಾರೆ
Previous Articleಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ
Next Article ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !