ಬೆಂಗಳೂರು, ಜೂ.27-
ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರವಾಗಿ ಗೊಂದಲ ಇನ್ನಷ್ಟು ಮುಂದುವರೆದಿದೆ ಸದ್ಯದಲ್ಲಿಯೇ ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ವಿಜಯೇಂದ್ರ ಹೇಳಿದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸದ್ಯಕ್ಕೆ ಇದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಪಕ್ಷದ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿರುವ ಆರ್.ಅಶೋಕ್ ಮೂರು ದಿನಗಳಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಮೂರು ನಾಲ್ಕು ದಿನಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಆಗಲಿದೆ ಎಂಬ ವರದಿಗಳೆಲ್ಲಾ ಸುಳ್ಳು ವರಿಷ್ಠರು ಈ ಬಗ್ಗೆ ಚರ್ಚೆಯೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಸಾಂತ್ಯಕ್ಕೆ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿ ಗಡುವನ್ನು ಕೊಟ್ಟಿವೆ. ಇದು ಸಾಧ್ಯವೇ ಇಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಕರ್ನಾಟಕ ರಾಜ್ಯದ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ. ಹೀಗಿರುವಾಗ 3-4 ದಿನಗಳಲ್ಲಿ ಅಧ್ಯಕ್ಷರ ನೇಮಕ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಕರ್ನಾಟಕ ಹೊರತುಪಡಿಸಿ ದೇಶದ ಬೇರೆ ರಾಜ್ಯಗಳ ಬಿಜೆಪಿ ಅಧ್ಯಕ್ಷರ ನೇಮಕದ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳಾಗಿರುವುದು ನಿಜ. ಆದರೆ, ಕರ್ನಾಟಕ ಬಿಜೆಪಿ ಅಧ್ಯಕ್ಷರ ಆಯ್ಕೆ, ನೇಮಕ, ಬದಲಾವಣೆ ಯಾವುದರ ಬಗ್ಗೆಯೂ ಚರ್ಚೆಗಗಳೇ ನಡೆದಿಲ್ಲ. ನಾನು ಪಕ್ಷದ ಹಲವು ಮುಖಂಡರ ಜೊತೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಿದ್ದೇನೆ ಆದರೆ ಎಲ್ಲಿಯೂ ಪಕ್ಷದ ಅಧ್ಯಕ್ಷರ ನೇಮಕ ಕುರಿತು ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ತಟಸ್ಥರು, ಹೊಸಬರು, ಮೂಲ ಎಂಬಂತಹ ಯಾವುದೇ ಬಣಗಳಿಲ್ಲ ನಾನಂತೂ ಯಾವುದೇ ಬಣಕ್ಕೆ ಸೇರಿದವನಲ್ಲ. ಪಕ್ಷದ ಹಳೆಯ ಕಾರ್ಯಕರ್ತ,ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮಲ್ಲೂ ಒಂದು ವ್ಯವಸ್ಥೆ ಇದೆ. ಎಲ್ಲರ ಅಭಿಪ್ರಾಯಗಳನ್ನು ಕೇಳಿ, ನಂತರ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದರು.
ನೂತನ ಅಧ್ಯಕ್ಷರ ನೇಮಕ ಸೇರಿದಂತೆ ಪಕ್ಷದ ವಿಚಾರಗಳ ಬಗ್ಗೆ ಕೇಂದ್ರ ಸಚಿವರಾದ ಪ್ರಲ್ಹಾದ್‌ಜೋಶಿಯವರಿಗೆ ಎಲ್ಲ ನಾಯಕರುಗಳು ತಮ್ಮ ಅಭಿಪ್ರಾಯ ಹೇಳುವರು. ಇದಾದ ಬಳಿಕ ಜೋಷಿ ಆವರು ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ ಆ ಬಳಿಕ ಹೈಕಮಾಂಡ್ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ತೀರ್ಮಾನ ಮಾಡುತ್ತದೆ. ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ರಾಜ್‌ನಾಥ್ ಸಿಂಗ್, ಪ್ರಲ್ಹಾದ್‌ಜೋಷಿ, ವರಿಷ್ಠ ನಾಯಕರುಗಳಾದ ಬಿ.ಎಲ್ ಸಂತೋಷ್, ಧರ್ಮೇಂದ್ರ ಪ್ರಧಾನ್, ಅರುಣ್‌ಸಿಂಗ್ ಸೇರಿದಂತೆ ಹಲವು ನಾಯಕರ ಜತೆ ಮಾತನಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ಹೇಳಿದರು
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಸಂಬಂಧ ವರಿಷ್ಠರು ಮಾರ್ಗದರ್ಶನ ಸಲಹೆ ನೀಡಿದ್ದಾರೆ. ಅದರಂತೆ ನಾವುಗಳು ಹೋರಾಟ ರೂಪಿಸುತ್ತೇವೆ. ನಾವು ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ದೆಹಲಿಗೆ ಬಂದು ರಾಜ್ಯರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತೇನೆ. ನಾನು ಪದೇ ಪದೇ ದೆಹಲಿಗೆ ಬರುವವನಲ್ಲ ಎಂದರು.
