ಬೆಂಗಳೂರು,ಮಾ.5:
ರಾಜ ಬಿಜೆಪಿ ಕಾರ್ಯವೈಖರಿ ಬಗ್ಗೆ ಸಂಸದ ಹಾಗೂ ಹಿರಿಯ ನಾಯಕ ಗೋವಿಂದ ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಸಿಪಿ ಮತ್ತು ಟಿ ಎಸ್ ಪಿ ಹಣ ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವ ಕ್ರಮ ಖಂಡಿಸಿ ಕಲಬುರ್ಗಿಯಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ತಮ್ಮ ಪಕ್ಷದ ಬಗ್ಗೆ ಬೇಸರ ಹೊರಹಾಕಿದರು.
ರಾಜ್ಯದಲ್ಲಿ ಆಡಳಿತ ರೂಢ ಪಕ್ಷ ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಆಡಳಿತ ನಡೆಸುವಲ್ಲಿ ವಿಫಲವಾಗಿದೆ . ಆದರೆ ದುರದೃಷ್ಟ ಇತ್ತ ಬಿಜೆಪಿಯಲ್ಲೂ ಆಂತರಿಕ ಕಚ್ಚಾಟ ನಡೆದು ಪ್ರಬಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ವಿಫಲ ಹೊಂದಿದೆ ಎಂದು ಹೇಳಿದರು.
ಸಿಎಂ ಕುರ್ಚಿಗಾಗಿ ದಲಿತರು, ಲಿಂಗಾಯಿತ- ಒಕ್ಕಲಿಗರ ನಡುವೆ ಕಿತ್ತಾಟ ಜೋರಾಗಿ ನಡೆಯುತ್ತಿರುವುದರಿಂದ ಆಡಳಿತ ಸಂಪೂರ್ಣ ಕುಸಿದಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ದೂರಿದರು
ಇಂತಹ ಸಮಯದಲ್ಲಿ ಸರ್ಕಾರದ ವೈಪಲ್ಯ ವಿರುದ್ಧ ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಿರುವ ವಿಪಕ್ಷ ಬಿಜೆಪಿ ಸಹ ಊರ ಹೊರಗೆ ನಿಂತು ಬೊಗಳು ತ್ತಿದ್ದೇವೆ. ಹೀಗಾಗಿ ಆಡಳಿತ ಪಕ್ಷವಾಗಿ ಕಾಂಗ್ರೆಸ್ ಹಾಗೂ ವಿಪಕ್ಷವಾಗಿ ಬಿಜೆಪಿ ವಿಫಲ ಹೊಂದಿವೆ ಎಂದು ವಿವರಣೆ ನೀಡಿದರು.
ಬಿಜೆಪಿ ಕಚ್ಚಾಟವನ್ನು ದೆಹಲಿಯವರು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಈ ನಿಟ್ಟಿನಲ್ಲಿ ಈಗಾಗಲೇ ಹೈಕಮಾಂಡ್ ಮುಂದಾಗಿದ್ದು ಆದಷ್ಟು ಶೀಘ್ರ ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದರು.
ಅದೇ ತೆರನಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಾಗಿ ದಲಿತ ಸಿಎಂ ಆಗಲು ಅವಕಾಶ ಕಲ್ಪಿಸಿಕೊಡಬೇಕು. ಈ ಹಿಂದೆ ದಲಿತ ವರ್ಗದ ಖರ್ಗೆ ಸಿಎಂ ಆಗಬೇಕು ಎನ್ನಲಾಗುತ್ತಿತ್ತು. ಆದರೆ ಅವರಾಗಲಿಲ್ಲ. ಈಗ ದಲಿತರು ಸಿಎಂ ಆಗುವ ಅವಕಾಶವಿದೆ. ಮುಂದೆ ಕಾಂಗ್ರೆಸ್ ಮೂರಂಕಿ ದಾಟುವುದಿಲ್ಲ. ಹೀಗಾಗಿ ದಲಿತ ವರ್ಗದ ಡಾ. ಜಿ. ಪರಮೇಶ್ವರ, ರಮೇಶ ಜಾರಕಿಹೊಳಿ ಹಾಗೂ ಮುನಿಯಪ್ಪ ಹೀಗೆ ಯಾರೊಬ್ಬರಲ್ಲಿ ಒಬ್ಬರು ಸಿಎಂ ಆಗಲಿ. ಇದಕ್ಕೆ ಎಐಸಿಸಿ ಅಧ್ಯಕ್ಷರು ಮುಂದಾಗಲಿ ಹಾಗೂ ಇತಿಹಾಸ ನಿರ್ಮಾಣವಾಗಲಿ ಎಂದರು.
Previous Articleಮಂತ್ರಿ ಕೆ.ಎನ್.ರಾಜಣ್ಣ ಯಾಕೆ ಹೀಗೆ..?
Next Article ನಟಿ ರನ್ಯಾ ರಾವ್ ಕಳ್ಳದಂಧೆಯ ಪುರಾಣ