ಬೆಂಗಳೂರು,ಜೂ.17:
ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿ,ಕೂಡಲೇ ದರ ಹೆಚ್ಚಳ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು
ಬೆಂಗಳೂರು, ಬೆಳಗಾವಿ, ತುಮಕೂರು ಶಿವಮೊಗ್ಗ,
ಮಂಡ್ಯ, ದಕ್ಷಿಣ ಕನ್ನಡ, ದಾವಣಗೆರೆ, ರಾಯಚೂರು, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಮೋರ್ಚಾಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಕಡೆ ಕಾರಿಗೆ ಹಗ್ಗ ಕಟ್ಟಿ ಎಳೆದರೆ ಇನ್ನು ಕೆಲವು ಕಡೆ ಎತ್ತಿನ ಗಾಡಿ ಮೆರವಣಿಗೆ, ಶವಯಾತ್ರೆ, ತೆಂಗಿನಕಾಯಿ ಚಿಪ್ಪು, ಕರಪತ್ರ ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಜನವಿರೋಧಿ, ರೈತ ವಿರೋಧಿ ಎಂದು ಕಿರಿಕಾರಿದರು.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್,ಮುಖಂಡರಾದ ಸಿ.ಟಿ.ರವಿ, ಭೈರತಿ ಬಸವರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಎಚ್ಚರಿಕೆ:
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ
ಅಧಿಕಾರಕ್ಕೆ ಬಂದ ಮೇಲೆ ಜನ ಸಾಮಾನ್ಯರ ಸಂಕಷ್ಟ ಹೆಚ್ಚಾಗಿದೆ. ಅವೈಜ್ಞಾನಿಕವಾಗಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ ಎಂದು ಆಪಾದಿಸಿದರು.
ಈ ಹೆಚ್ಚಳವನ್ನು ಕೂಡಲೆ ವಾಪಸ್ ಪಡೆಯಬೇಕು
ಮುಂದಿನ ವಾರ ನಾವು ಮತ್ತು ಜೆಡಿಎಸ್‌ನವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಸ್ತೆ ತಡೆ ನಡೆಸಲಿದ್ದೇವೆ. ಬೆಲೆ ಹಿಂತೆಗೆದುಕೊಳ್ಳುವವರೆಗೂ ನಮ ಹೋರಾಟ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ನಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.
ರೈತರು, ಬಡವರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಗ್ಯಾರಂಟಿ ಮೂಲಕ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ಕೊಡಲು ಹೊರಟಿದೆ. ಒಬ್ಬ ಅನುಭವಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎಂಬ ಕಾರಣಕ್ಕೆ ಜನರಿಗೆ ಬೆಲೆ ಏರಿಕೆ ಮಾಡಿದ್ದಾರೆ. ಇದು ಜನ ವಿರೋಧಿ ಸರ್ಕಾರವಲ್ಲವೇ ಎಂದು ಪ್ರಶ್ನಿಸಿದರು.
ವಿಧಾನಸೌಧ ಒತ್ತೆ:
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ,
ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗದಿದ್ದರೆ ಮುಂದಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧವನ್ನೇ ಅಡ ಇಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಟೀಕಿಸಿದರು.
ಈಗಾಗಲೇ ಕಾರ್ಪೋರೇಷನ್ ಕಟ್ಟಡಗಳು , ವಾರ್ಡ್ ಕಚೇರಿ ಅಡ ಇಟ್ಟು ಬ್ಯಾಂಕ್‌ನಿಂದ ಸಾಲ ಪಡೆಯಲು ಇಟ್ಟಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದರೆ ಸಿಎಂ ಸಿದ್ದರಾಮಯ್ಯನವರು ವಿಧಾನಸೌಧವನ್ನು ಅಡ ಇಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ಅಂದು ಆಡಳಿತದಲ್ಲಿದ್ದಾಗ ಒಂದು ರೂ. ಬೆಲೆ ಹೆಚ್ಚಳ ಮಾಡಿದ್ದಕ್ಕೆ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದರು. ಈಗ ಪೆಟ್ರೋಲ್ ದರವನ್ನು 3 ರೂ. 50 ಪೈಸೆ ಹಾಗೂ ಡೀಸೆಲ್ ದರವನ್ನು 3 ರೂ.ಗೆ ಏರಿಕೆ ಮಾಡಿದ್ದಾರೆ. ಹಾಗಾದರೆ ನಿಮ ಸರ್ಕಾರಕ್ಕೆ ಮಾನಮರ್ಯಾದೆ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ತುಮಕೂರಿನಲ್ಲಿ ಭದ್ರಾ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಭದ್ರಮ ವೃತ್ತದಿಂದ ಕನಕ ವೃತ್ತದವರೆಗೆ ಪ್ರತಿಭಟನಾ ಮೆರಣಿವಣಿಗೆ ನಡೆಸಲಾಯಿತು. ಶಾಸಕ ಜ್ಯೋತಿ ಗಣೇಶ್ ಪ್ರತಿಭಟನೆಗೆ ಸೈಕಲ್ ಏರಿ ಬಂದಿದ್ದು, ವಿಶೇಷವಾಗಿತ್ತು.
ದಕ್ಷಿಣಕನ್ನಡದಲ್ಲಿ ಅಣುಕು ಶವಯಾತ್ರೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದ ಸರ್ಕಾರ ಜನರ ಜೇಬಿಗೆ ದರದ ಬರೆಯನ್ನು ಎಳೆದಿದೆ. ಬೇರೆ ರಾಜ್ಯಗಳಲ್ಲಿ ಅಷ್ಟಿತ್ತು, ಇಷ್ಟಿತ್ತು ಎನ್ನುವ ಬದಲು ಮೊದಲು ನೀವು ಕಡಿಮೆ ಮಾಡಿ ಎಂದು ಸವಾಲು ಹಾಕಿದರು.
Previous Articleಪೆಟ್ರೋಲ್ ಡೀಸೆಲ್ ಬೆಲೆ ರೂ.3 ಹೆಚ್ಚಳ.
Next Article ಜನರಿಗೆ ತೊಂದರೆಯಾಗದಂತೆ ತೆರಿಗೆ ಹಾಕುತ್ತಾರಂತೆ.