ಸಾತನೂರು, ಸೆ. 28:
“ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ ಬಳಿ ಲಂಚ ಕೇಳಿದರೆ ಬೆಂಗಳೂರಿನ ನನ್ನ ವಿಳಾಸಕ್ಕೆ ಅವರ ಹೆಸರು ಸಹಿತ ಪತ್ರ ಬರೆಯಿರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸಾತನೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಈ ತಾಲೂಕಿನಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯಬೇಕು. ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಬೇಕು” ಎಂದರು.
ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸರ್ಕಾರದ ಸೌಲಭ್ಯ ಕೂಡಲು ಕೆಲವು ಅಧಿಕಾರಿಗಳು ಮತ್ತು ಪಕ್ಷದ ಮುಖಂಡರು ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ
ಯಾರಾದರೂ ಲಂಚ ಕೇಳಿದ್ದಾರೆ ಅಥವಾ ಪಡೆದಿದ್ದಾರೆ ಎಂದು ಗೊತ್ತಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.
ಈ ಹಿಂದೆ ಕ್ಷೇತ್ರದಲ್ಲಿ 8 ಸಾವಿರಕ್ಕೂ ಹೆಚ್ಚು ಜನರಿಗೆ ಬಗರ್ ಹುಕುಂ ಜಮೀನು ನೀಡಿದ್ದೇವೆ. ನಿವೇಶನ, ಮನೆ ಹಂಚಿದ್ದೇವೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಜನರು ಆಶೀರ್ವಾದ ಮಾಡಲಿಲ್ಲ. ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ” ಎಂದರು.
ಈ ಭಾಗವನ್ನು ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಜಮೀನುಗಳ ಬೆಲೆಯೂ ಹೆಚ್ಚಾಗಿದೆ. ಎರಡು, ಮೂರು ಲಕ್ಷ ಬಾಳುತ್ತಿದ್ದ ಜಮೀನುಗಳ ಬೆಲೆ ದುಪ್ಪಟ್ಟಾಗಿದೆ. ನಾನು ಹಿಂದೆ ಜಮೀನುಗಳನ್ನು ಮಾರಬೇಡಿ ಎಂದು ಸಲಹೆ ನೀಡಿದ್ದೆ. ಆದರೂ ಒಂದಷ್ಟು ಜನ ಜಮೀನುಗಳನ್ನು ಮಾರಿಕೊಂಡಿದ್ದಾರೆ” ಎಂದು ಹೇಳಿದರು
ಈ ಭಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಎಂಟು ಎಕರೆಯಲ್ಲಿ ಸಿಎಸ್ಆರ್ ನಿಧಿಯಿಂದ ದೊಡ್ಡ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಜೊತೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರನ್ನು ಸಬಲರನ್ನಾಗಿ ಮಾಡಿದೆ” ಎಂದು ತಿಳಿಸಿದರು.
ನಂತರ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಹಲವಾರು ಸಮಸ್ಯೆಗಳನ್ನು ಹೊತ್ತು ಸುಮಾರು 700ಕ್ಕೂ ಹೆಚ್ಚು ಅರ್ಜಿಗಳು ಬಂದವು. ಒಂದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಡಿಸಿಎಂ ಪರಿಹಾರ ಸೂಚಿಸಿದರು.
Previous Articleಕೋಲಾರ ಕಾಂಗ್ರೆಸ್ ನಲ್ಲಿ ಜಟಾಪಟಿ.
Next Article ಜಿಗಣಿಯಲ್ಲಿ ಸಿಕ್ಕಿ ಬಿದ್ದ ಪಾಕ್ ಪ್ರಜೆ.