ನನ್ನ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎನ್ನುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾಲ್ಕು ಕೋಟಿ ರೂಪಾಯಿ ಕೆಲಸ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆ ಏಕೆ ಬೆಂಬಲ ನೀಡಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿಮ್ಮದೆ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ್ದ ಸಂತೋಷ್ ಪಾಟೀಲ್ ಗೆ ನೀವು ಸಹಕಾರ ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ತಾವೊಬ್ಬ ರಾಷ್ಟ್ರೀಯ ನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತೀರಿ. ನೀವು, ಇದನ್ನ ಸರಿಯಾದ ರೀತಿಯಿಂದ ನಿರ್ವಹಣೆ ಮಾಡಬೇಕಿತ್ತು. ನಿಮ್ಮ ಕ್ಷೇತ್ರದಲ್ಲಿ ಕೆಲಸ ಆಗಿದ್ದಾಗ ನೀವೇ ಅವರನ್ನ ಕರೆದುಕೊಂಡು ಹೋಗಿ ಬಿಲ್ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು ಎಂದು ಸವಾಲು ಹಾಕಿದರು.
ಸಾವಿರಾರು ಕೋಟಿ ತರುವ ನಿಮಗೆ ನಾಲ್ಕು ಕೋಟಿ ರೂಪಾಯಿ ಹೊರೆಯಾಗುತ್ತಿರಲಿಲ್ಲ. ನಾಲ್ಕು ಕೋಟಿ ರೂಪಾಯಿ ಕೊಡಿಸಲು ಆಗದಿರುವ ನೀವು ಅದರ ನೈತಿಕ ಹೊಣೆಗಾರಿಕೆಯನ್ನು ನೀವೇ ಹೊರಬೇಕು. ಘಟನೆ ನಡೆದ ಬಳಿಕ ಶಾಸಕಿ ಶವ ಇಟ್ಟುಕೊಂಡು ರಾಜಕೀಯ ಮಾಡುವ ಪ್ರಯತ್ನ ಮಾಡುವುದಲ್ಲ ಎಂದು ಕಿಡಿಕಾರಿದರು.