ಬೆಂಗಳೂರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಅಭಿವೃದ್ಧಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಿಜೆಪಿ ನಾಯಕ ಸಿಟಿ ರವಿ ಅವರ ನಡುವಿನ ವಿವಾದಕ್ಕೆ ರಾಜಿ ಸಂಧಾನದ ಮೂಲಕ ತೆರೆ ಎಳೆಯಲು ತೆರೆಮರೆಯಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಶೇಷ ಆಸಕ್ತಿ ವಹಿಸಿ ಪ್ರಕರಣಕ್ಕೆ ರಾಜಿ ಸಂಧಾನದ ಮೂಲಕ ತೆರೆ ಎಳೆಯಲು ಪ್ರಯತ್ನ ನಡೆಸಿದ್ದರು. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಜೊತೆಗೆ ಮಾತುಕತೆ ನಡೆಸಿ ವಿವಾದ ಬಗೆಹರಿಸಲು ಪ್ರಯತ್ನ ನಡೆಸಿದ್ದರು.
ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ತಾವು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆಗೂ ಮಾತುಕತೆ ನಡೆಸುವುದಾಗಿ ಹೊರಟ್ಟಿ ಅವರು ಹೇಳಿದ್ದರು ಎನ್ನಲಾಗಿದೆ. ಆದರೆ, ರಾಜಿ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಮಗೆ ಸಮ್ಮತಿ ಇಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಈ ಕುರಿತಂತೆ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ನಾವು ಗೌರವಿಸುವುದಾಗಿ ಹೇಳಿದರು ಎನ್ನಲಾಗಿದೆ.
ಅಲ್ಲಿಯೇ ದೂರವಾಣಿ ಕರೆ ಮಾಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜೊತೆ ಸಭಾಪತಿಗಳ ಪ್ರಸ್ತಾವನೆಯ ಕುರಿತಂತೆ ಮಾತನಾಡಿದ ಮುಖ್ಯಮಂತ್ರಿಗಳು ನೀವು ಕೈಗೊಳ್ಳುವ ತೀರ್ಮಾನವನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಎಲ್ಲವನ್ನು ಕೇಳಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಹಿರಿಯರಾದ ತಮ್ಮ ನಿರ್ಧಾರಕ್ಕೆ ನಾನು ಬದ್ಧ ಆದರೆ ನನ್ನ ಬಗ್ಗೆ ಅತ್ಯಂತ ತುಚ್ಚ ರೀತಿಯಲ್ಲಿ ಸಿಟಿ ರವಿ ಮಾತನಾಡಿದ್ದಾರೆ ಅವರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದೇನೆ ಆದರೂ ಕೂಡ ನೀವು ಕೈಗೊಳ್ಳುವ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಹೇಳುತ್ತಿದ್ದಂತೆ ಮುಖ್ಯಮಂತ್ರಿಗಳು ನಿಮ್ಮ ನಿರ್ಧಾರಕ್ಕೆ ನಾವು ಬೆಂಬಲವಾಗಿ ನಿಲ್ಲಲಿದ್ದೇವೆ ಕಾನೂನು ಹೋರಾಟ ಮುಂದುವರಿಸಿ ಎಂದು ಸಲಹೆ ಮಾಡಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.
ಇದಾದ ನಂತರ ಸಭಾಪತಿ ಹೊರಟಿ ಅವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು ಈ ವಿಷಯವಾಗಿ ಸಂಧಾನದ ಪ್ರಸ್ತಾಪ ಬೇಡ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜೊತೆ ಪಕ್ಷ ಮತ್ತು ಸರ್ಕಾರ ನಿಲ್ಲಲಿದೆ ತನಿಖೆ ನಡೆಯಲಿ ಎಂದು ಹೇಳಿದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗಾರರ ಜತೆ ಮಾತನಾಡಿ,
ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ತನಿಖಾ ತಂಡ ತಮಗೆ ಸ್ಥಳ ಮಹಜರು ಮಾಡಲು ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದೆ. ತನಿಖಾಧಿಕಾರಿಗಳು ಪ್ರಕರಣ ನಡೆದ ಸಂದರ್ಭದಲ್ಲಿ ಅಲ್ಲಿದ್ದವರನ್ನು ಕರೆಸಿ ಸ್ಥಳ ಮಹಜರು ಮಾಡುತ್ತಾರೋ, ಖಾಲಿ ಸ್ಥಳದಲ್ಲಿ ಮಹಜರು ಮಾಡುತ್ತಾರೋ ಎಂಬುದು ಮೊದಲು ನಮಗೆ ಗೊತ್ತಾಗಬೇಕು. ಅನಂತರ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು. ಈ ಕುರಿತು ಪರಿಷತ್ ಕಾರ್ಯದರ್ಶಿಗಳು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದರು.
ಪ್ರಕರಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಮಗೆ ಪತ್ರ ಬರೆದಿದ್ದು ಬಿಟ್ಟರೆ ವೀಡಿಯೋ ಸಹಿತ ಯಾವುದೇ ದಾಖಲೆ ನೀಡಿಲ್ಲ. ಯಾವ ಮಾಧ್ಯಮದವರೂ ಸಾಕ್ಷಿಯಾಗುವಂಥದ್ದನ್ನು ತೋರಿಸಿಲ್ಲ. ಎಲ್ಲರೂ ಮೊಬೈಲ್‌ನಲ್ಲಿ ತೋರಿಸುತ್ತಿದ್ದಾರೆ. ಯಾರಾದರೂ ಮಾಧ್ಯಮದವರು ದಾಖಲೆ ನೀಡಿದರೆ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು ಎಂದು ಹೇಳಿದರು
ಮಂತ್ರಿ ಹೆಬ್ಬಾಳ್ಕರ್ ಅವರು, ಸಭಾಪತಿಗಳು ಮಾಧ್ಯಮಗಳಿಗೆ ಪರಿಷತ್ ಒಳಗೆ ಬರಲು ಅವಕಾಶ ನೀಡಿದ್ದು, ಘಟನೆ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ತೋರಿಸಿದ್ದು ಸುಳ್ಳಾ’ ಎಂದು ಪ್ರಶ್ನಿಸಿದ್ದಾರೆ. ಕಲಾಪದಲ್ಲಿ ನಡೆಯುವುದು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ದೃಶ್ಯ ಮಾಧ್ಯಮದವರಿಗೆ ಅವಕಾಶ ನೀಡಿದ್ದೆ. ಸಚಿವರು ಹೀಗೆ ಮಾತನಾಡಿದರೆ ವಿಧಾನಸಭೆ ಮಾದರಿಯಲ್ಲಿ ಪರಿಷತ್‌ನಲ್ಲೂ ದೃಶ್ಯ ಮಾಧ್ಯಮ ಪ್ರವೇಶಕ್ಕೆ ನಿಷೇಧ ವಿಧಿಸುತ್ತೇನೆ. ಪ್ರಕರಣದ ಬಗ್ಗೆ ನನ್ನ ವ್ಯಾಪ್ತಿ ಬಿಟ್ಟು ನಾನು ಬೇರೇನೂ ಮಾಡುತ್ತಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಲಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ರಾಜ್ಯಪಾಲರನ್ನು ಭೇಟಿ ಆಗಿರುವುದು ಅವರ ವೈಯಕ್ತಿಕ ವಿಷಯ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ -ಸಿ.ಟಿ.ರವಿ ನಡುವೆ ಸಂಧಾನಕ್ಕೆ ಯತ್ನ.
Previous Articleವಿಜಯೇಂದ್ರ ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾ.
Next Article ಕಾಂಡೊಮ್ ಅತಿ ಹೆಚ್ಚು ಖರೀದಿಸಿದ್ದು ಯಾರು ಗೊತ್ತೇ.