ಬೆಂಗಳೂರು, ಆ.22:
ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ- ಲಿಂಗಾಯತ ಸಮಾಜದ ಹಿತದೃಷ್ಟಿಯಿಂದ ಒಗ್ಗಟ್ಟು ಕಾಪಾಡಲು ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ
ಗಣತಿ ವೇಳೆ ಸಮುದಾಯದ ನೈಜ ಸಂಖ್ಯೆ ತಿಳಿಯುವ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಲು ತೀರ್ಮಾನಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ವಯೋಸಹಜ ಅನಾರೋಗ್ಯದ ಕಾರಣ ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು ಎಂದು ಹೇಳಿದರು
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುವ ಸಮೀಕ್ಷೆಯಲ್ಲಿ ಸಮಾಜದ ಬಾಂಧವರು ಧರ್ಮ, ಜಾತಿಯ ಕಾಲಂನಲ್ಲಿ ಏನೆಂದು ಬರಸಬೇಕು ಎನ್ನುವ ಬಗ್ಗೆ ಚರ್ಚಿಸಲಾಯಿತು ಎಂದರು.
ಸಮಾಜದ ಎಲ್ಲರೂ ವೀರಶೈವ ಅಥವಾ ಲಿಂಗಾಯತ ಎಂದು ನಮೂದಿಸಲು ಮನವಿ ಮಾಡುವ ನಿಟ್ಟಿನಲ್ಲಿ ಜನಾಭಿಪ್ರಾಯ ಮೂಡಿಸಲು ಉನ್ನತಮಟ್ಟದ ಸಮಿತಿ ರಚಿಸಿ, ಮಠಾಧಿಪತಿಗಳೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.
ಇದು ರಾಜಕೀಯ ಸಭೆಯಲ್ಲ, ಸಮಾಜದ ಜನರ ಹಿತ ಕಾಯುವ ಸಂಕಲ್ಪದೊಂದಿಗೆ ಎಲ್ಲ ಪಕ್ಷಗಳ ಲಿಂಗಾಯತ, ವೀರಶೈವ ಶಾಸಕರು ಸೇರಿ ನಡೆಸಿದ ಸಭೆಯಾಗಿದ್ದು, ಇಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು ಎಂದು ಸ್ಪಷ್ಟಪಡಿಸಿದರು.
ಮುಂಬರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರ ನೈಜ ಸಂಖ್ಯೆ ಹೊರಹೊಮ್ಮುವಂತೆ ಮಾಡುವುದೇ ಸಭೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು, ಸಮಾಜದ ಮಠಾಧಿಪತಿಗಳು, ಹರ, ಚರ ಗುರು ಮೂರ್ತಿಗಳ ಸಹಯೋಗದೊಂದಿಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಪಕ್ಷಾತೀತವಾಗಿ ಚರ್ಚಿಸಲಾಯಿತು ಎಂದರು.
ವೀರಶೈವ ಲಿಂಗಾಯತ ಸಮುದಾಯ ಮೊದಲಿನಿಂದಲೂ ಸರ್ವರಿಗೂ ಲೇಸು ಬಯಸುವ ಸಮುದಾಯವಾಗಿದೆ. ಸಮ ಸಮಾಜದ ಕಲ್ಪನೆ ಕೊಟ್ಟಿದ್ದೇ ನಮ್ಮ ಸಮುದಾಯ. ಯಾವುದೇ ಜಾತಿಯ ಜನರ ಅರ್ಹ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ನಮಿಗಿಲ್ಲ. ಆದರೆ ನಮ್ಮ ಸಮಾಜಕ್ಕೂ ಅನ್ಯಾಯವಾಗದಂತೆ ಸಮಾಜದ ಇಂದಿನ ಸ್ಥಿತಿ-ಗತಿ ಮತ್ತು ಸಂಖ್ಯೆಯನ್ನು ನಿಖರವಾಗಿ ಪಡೆಯುವುದಾಗಿದೆ ಎಂದರು.
ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯಾಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸಭೆಯಲ್ಲಿ ಸಲಹೆ ನೀಡಿ, ಒಳ ಪಂಗಡಗಳ ಹೆಸರನ್ನಷ್ಟೇ ಬರಸದೆ ಎಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು, ಉಪ ಜಾತಿಯ ಕಾಲಂನಲ್ಲಿ ಒಳ ಪಂಗಡದ ಹೆಸರು ಬರೆಸುವಂತೆ ಅರಿವು ಮೂಡಿಸಬೇಕೆಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜಾತಿಯ ಹೆಸರು ಬರೆಸುವ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಇದರ ನಿವಾರಣೆಗೆ ಸಮಾಜದ ಎಲ್ಲ ಬಾಂಧವರಿಗೆ ಸರಿಯಾದ ಮಾಹಿತಿ ರವಾನಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾಸಭಾದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಪ್ರತಿಪಾದಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮುಂದಿನ ತಿಂಗಳಿನಿಂದಲೇ ಸಮೀಕ್ಷೆ ಆರಂಭವಾಗಲಿದ್ದು, ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಸಂಸತ್ ಸದಸ್ಯ ಪ್ರಭಾಕರ ಕೋರೆ ನಮ್ಮ ಸಮಾಜದ ವಿವಿಧ ಸಂಘಟನೆಗಳಿದ್ದು, ಅದರ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಮೊದಲಿಗೆ ಈ ಬಗ್ಗೆ ಮಾಹಿತಿ ನೀಡಿ ಇದನ್ನು ಸಮಾಜದ ಎಲ್ಲರಿಗೂ ತಲುಪಿಸುವ ಮೂಲಕ ಸಮೀಕ್ಷೆಯಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಲು ಮನವಿ ಮಾಡಬೇಕೆಂದರು.
ಸಚಿವರುಗಳಾದ ದರ್ಶನಾಪೂರ, ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವಾನಂದ ಪಾಟೀಲ್, ಶಾಸಕರುಗಳಾದ ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಎಂ.ವೈ ಪಾಟೀಲ್, , ಶರಣು ಸಲಗಾರ್ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಹಾಗೂ ಸಭಾದ ಶಂಕರ್ ಬಿದರಿ ಮತ್ತು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿ ಮತ್ತಿತರರು ಪಾಲ್ಗೊಂಡಿದ್ದರು