ಬೆಂಗಳೂರು,ಏ.15:
ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳಿಗೆ ವರ ರಾಜ್ಯಗಳಿಂದ ಬರುತ್ತಿರುವ ವಲಸೆ ಕಾರ್ಮಿಕರಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿದೆ ಎಂಬ ವರದಿಗಳ ಬೆನ್ನೆಲ್ಲೇ ಕಾರ್ಮಿಕ ಇಲಾಖೆ ಇಂತಹ ವಲಸೆ ಕಾರ್ಮಿಕರ ವಿವರ ಸಂಗ್ರಹಿಸಲು ಮುಂದಾಗಿದೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಐದು ವರ್ಷದ ಬಾಲಕಿ ಹತ್ಯೆ ಪ್ರಕರಣದ ಬೆನ್ನಲ್ಲೇ ಗೃಹ ಇಲಾಖೆ ವಲಸೆ ಕಾರ್ಮಿಕರ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಹೊರಗೆಡವಿದೆ.ಈ ಹಿನ್ನೆಲೆಯಲ್ಲಿ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು
ಸಭೆಯಲ್ಲಿ ಕಟ್ಟಡ, ರಸ್ತೆನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ವಲಯಗಳಿಗೆ ಕೆಲಸ ಅರಸಿ ಬರುವ ವಲಸೆ ಕಾರ್ಮಿಕರ ವಿವರಗಳನ್ನು ಸಂಗ್ರಹಿಸುವಂತೆ ಸಂಬಂಧಪಟ್ಟ ಕೆಲಸಗಳ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಯ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಬೇರೆ ರಾಜ್ಯದ ಕಾರ್ಮಿಕರ ಮಾಹಿತಿ ಸಂಗ್ರಹಿಸುವುದು ತುಂಬಾ ಕಷ್ಟವಿದೆ. ಅದು ನಮಗೆ ಸವಾಲು. ಆದರೂ ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಘಟನೆ ತುಂಬಾ ನೋವು ತಂದಿದೆ. ಇಂತಹ ಘಟನೆ ದೇಶದ ಯಾವುದೇ ಮೂಲೆಯಲ್ಲಿ ಯಾವಾಗ ಬೇಕಾದರೂ ನಡೆಯಬಹುದು. ಅಂತಹ ಸಂದರ್ಭದಲ್ಲಿ ಕೃತ್ಯ ಎಸಗಿದವರ ಮಾಹಿತಿ ಸಂಗ್ರಹವಿದ್ದರೆ ಸುಲಭವಾಗಲಿದೆ. ಈ ಬಗ್ಗೆ ಗುತ್ತಿಗೆದಾರರು ಮಾಹಿತಿ ನೀಡಬೇಕು. ಜನರಲ್ಲಿ ಅರಿವು ಮೂಡಿಸಬೇಕು. ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಬೇಕು. ಯಾವುದೇ ಗುತ್ತಿಗೆ ಕಾರ್ಮಿಕ ಬೇರೆ ರಾಜ್ಯದಿಂದ ಬಂದರೆ ಅವರ ಮಾಹಿತಿ ಸಂಗ್ರಹಿಸಿ ಎಂದು ಸೂಚಿಸಿದರು.
ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರ ಎಲ್ಲಾ ಮಾಹಿತಿ ಸಿಗಲಿದೆ. ಆದರೆ ಅಸಂಘಟಿತ ವಲಯದ ಕಾರ್ಮಿಕರ ವಿವರ ಸಿಗುವುದಿಲ್ಲ. ವಿಶೇಷವಾಗಿ ನಿರ್ಮಾಣ ಕಾರ್ಮಿಕರ ಬಗ್ಗೆ. ಇಂತಹ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಯಾವುದಾದರೂ ಮಾರ್ಗೋಪಾಯಗಳಿದ್ದರೆ ತಿಳಿಸಿ ಎಂದರು.
ಗುತ್ತಿಗೆದಾರರು ನೋಂದಣಿ ಮಾಡಬೇಕು ಎಂಬ ನಿಯಮ ಇದೆ. ಆದರೆ ಮಾಡುವುದಿಲ್ಲ. ಯಾರು ಎಲ್ಲಿ ಏನು ಕೆಲಸ ಮಾಡ್ತಾ ಇದ್ದಾರೆ ಎಂಬುದು ತಿಳಿಯುವುದಿಲ್ಲ. ಕೇವಲ ಕಾರ್ಮಿಕ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಯ ಕಾರ್ಮಿಕರ ವಿವರ ಸಿಗುವಂತಾಗಬೇಕು ಎಂದು ಹೇಳಿದರು.
Previous Articleಬೆಂಗಳೂರಿನಲ್ಲಿ ತಾಲಿಬಾನ್ ಶಿಕ್ಷೆ
Next Article ಮುಡಾ ಸುಳಿಯಲ್ಲಿ ಸಿದ್ದರಾಮಯ್ಯ ವಿಲವಿಲ !