ಯಾದಗಿರಿ,ಆ.30-
ರಾಜ್ಯ ಸರ್ಕಾರದ ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಮಗು ಮತ್ತು ತಾಯಿ ಆರೋಗ್ಯವಾಗಿದ್ದು ಇಬ್ಬರನ್ನೂ ನಿರೀಕ್ಷಣಾ ಮಂದಿರದಲ್ಲಿ ಇರಿಸಲಾಗಿದೆ.
ಈ ಸುದ್ದಿ ಮಾಧ್ಯಮಗಳಲ್ಲಿ ವರದಿ ಯಾಗುವ ಮೂಲಕ ಸಾಕಷ್ಟು ಸಂಚಲನ ಮೂಡಿಸಿತ್ತು.
ಈ ಬಗ್ಗೆ ವಸತಿ ಶಾಲೆಯ ಮುಖ್ಯಸ್ಥರು ನೀಡಿದ ದೂರು ಆಧರಿಸಿ ಪ್ರಮುಖ ಆರೋಪಿಯನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ. ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ(30) ಬಂಧಿತ ಆರೋಪಿಯಾಗಿದ್ದಾನೆ.ಪ್ರಕರಣದ ಸಂಬಂಧ ಹಾಸ್ಟೆಲ್ ವಾರ್ಡನ್ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಾದಾಗ ಎ1 ಆರೋಪಿ ಸ್ಥಾನ ಖಾಲಿ ಇಡಲಾಗಿತ್ತು. ಈಗ ಪರಮಣ್ಣನನ್ನು ಬಂಧಿಸಿ ಎ1 ಆರೋಪಿ ಮಾಡಿದ್ದಾರೆ.
ಬಂಧಿತ ಆರೋಪಿ ಪರಮಣ್ಣ, ಅಪ್ರಾಪ್ತ ಬಾಲಕಿ ಜೊತೆ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದನು.
ಪ್ರಮುಖ ಆರೋಪಿಯನ್ನು ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಬಾಲಕಿ ಅಸ್ಪೃಶ್ಯ ಪಂಗಡಕ್ಕೆ ಸೇರಿದ್ದು, ಆರೋಪಿ ಸ್ಪರ್ಶ ಸಮುದಾಯಕ್ಕೆ ಸೇರಿದವನಾಗಿದ್ದರಿಂದ ಅಟ್ರಾಸಿಟಿ ಪ್ರಕರಣವನ್ನು ಸೇರಿಸಿ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಮುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಸುರಪುರ ಡಿವೈಎಸ್ಪಿ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಯು ಹಳ್ಳಿಯಲ್ಲಿ ಆಕೆಯ ಮನೆಯ ಬಳಿಯಲ್ಲೇ ವಾಸವಾಗಿದ್ದಾನೆ ಎಂದು ಹೇಳಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವೂ ಇದೆ. ಆದರೂ, ಆತ ಈ ಹುಡುಗಿಯನ್ನು ಮರುಳು ಮಾಡಿ ಆಕೆಯ ಇಂಥ ಪರಿಸ್ಥಿತಿಗೆ ಕಾರಣನಾಗಿದ್ದಾನೆ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿಯು 9ನೇ ತರಗತಿಯಲ್ಲಿ ಓದುತ್ತಿದ್ದು ಆಕೆ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಹಾಸ್ಟೆಲ್ ಹತ್ತಿರದಲ್ಲೇ ತನ್ನ ಹಳ್ಳಿಯಿದಿದ್ದರಿಂದ ತನ್ನ ಮನೆಗೆ ಆಗಾಗ ಹೋಗಿಬರುತ್ತಿದ್ದಳು. ಆರೋಪಿಯು ಆಕೆಯ ಮನೆಯ ಬಳಿಯಲ್ಲೇ ವಾಸವಾಗಿದ್ದಾನೆ. ಮನೆ ಹತ್ತಿರದಲ್ಲಿದ್ದ ಆತ ಆಕೆಗೆ ಪರಿಚಯವಾಗಿದ್ದಾನೆ. ಅವರಿಬ್ಬರ ನಡುವೆ ಪ್ರೇಮವಾಗಿ ಅದೇ ಈ ಪರಿಸ್ಥಿತಿ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಕೆಗೆ, ತನ್ನ ವಸತಿ ನಿಲಯದ ಶೌಚಾಲಯದಲ್ಲಿ ಹೆರಿಗೆ ಆದಾಗಲೇ ವಿಚಾರ ಬೆಳಕಿಗೆ ಬಂದಿದೆ. ಸಂತ್ರಸ್ಥ ಬಾಲಕಿಯನ್ನೂ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಆಕೆ ಹೆರಿಗೆಯಾಗಿ ಇನ್ನೂ ಶುಶ್ರೂಷೆಯಲ್ಲಿರುವುದೇ ಅದಕ್ಕೆ ಕಾರಣ. ಆದರೂ ಪ್ರಾಥಮಿಕ ತನಿಖೆಯಲ್ಲಿ ಈ ವಿಚಾರ ತಿಳಿದುಬಂದಿದೆ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ.
Previous ArticleSIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?
Next Article ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !