ಬೆಂಗಳೂರು,ಆ. 9-
ನೈಸ್ ರಸ್ತೆಯಲ್ಲಿ ಅತಿವೇಗದ ವಾಹನ ಚಾಲನೆ ಮಾಡುವ ಮೂಲಕ ಮಾಡುವವರ ಮೇಲೆ ಕಣ್ಣಿಡಲು ನಗರದ ಸಂಚಾರ ಪೊಲೀಸರು ಲೇಸರ್ ಟ್ರ್ಯಾಕ್ ಗನ್’ ಅಳವಡಿಸಿದ್ದಾರೆ.
ಲೇಸರ್ ಟ್ರ್ಯಾಕ್ ಗನ್’ ಮೂಲಕ ಅತಿವೇಗದ ವಾಹನ ಚಲಾಯಿಸುವ ಚಾಲಕರನ್ನು ಪತ್ತೆಹಚ್ಚಿ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಲೇಸರ್ ಟ್ರ್ಯಾಕ್ ಗನ್ ವಾಹನಗಳು ಚಲಿಸುತ್ತಿರುವ ವೇಗವನ್ನು ಪತ್ತೆಹಚ್ಚುವ ಒಂದು ಸಾಧನವಾಗಿದೆ. ನೈಸ್ ರಸ್ತೆಯಲ್ಲಿ ಅಲ್ಲಲ್ಲಿ ಪ್ರಯಾಣಿಕರ ಅರಿವಿಗೆ ಬಾರದಂತೆ ಈ ಸಾಧನದೊಂದಿಗೆ ಸಂಚಾರ ಪೊಲೀಸರು ನಿಗಾ ಇರಿಸಲಿದ್ದಾರೆ.
ಯಾವುದೇ ವಾಹನ ನಿಗದಿತ ಮಿತಿಗಿಂತ ವೇಗವಾಗಿ ಸಂಚರಿಸಿದರೆ ಲೇಸರ್ ಟ್ರ್ಯಾಕ್ ಗನ್ ಅದನ್ನು ಸೆರೆಹಿಡಿಯಲಿದೆ.ವಾಹನದ ನಂಬರ್ ಅನ್ನು ಈ ಯಂತ್ರ ಪತ್ತೆ ಮಾಡುತ್ತದೆ. ಲೇಸರ್ ಟ್ರ್ಯಾಕ್ ಗನ್ ಇರಿಸಿದ ಜಾಗದಿಂದ ಟೋಲ್ ಬಳಿಗೆ ವಾಹನದ ಮಾಹಿತಿ ಹೋಗುತ್ತದೆ. ವಾಹನದ ಫೋಟೊ ಹಾಗೂ ನಂಬರ್ ವಾಟ್ಸ್ಆ್ಯಪ್ ಮೂಲಕ ಟೋಲ್ ಬಳಿ ಇರುವ ಸಿಬ್ಬಂದಿಗೆ ರವಾನೆಯಾಗುತ್ತದೆ. ಟೋಲ್ ಬಳಿ ವಾಹನದ ವೇಗ ಕಡಿಮೆ ಆದಾಗ ವಾಹನ ತಡೆದು ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ.
ವಾರದಿಂದ ದಂಡ:
ಕಳೆದ ಒಂದು ವಾರದಿಂದ ಲೇಸರ್ ಟ್ರ್ಯಾಕ್ ಗನ್ ಮೂಲಕ ಅತಿವೇಗದ ಚಾಲನೆ ಪತ್ತೆಹಚ್ಚಿ ದಂಡ ವಸೂಲಿ ಮಾಡಲಾಗುತ್ತಿದೆ. ಒಂದೊಂದು ಮಾದರಿಯ ವಾಹನಕ್ಕೆ ಒಂದೊಂದು ವೇಗದ ಮಿತಿ ನಿಗದಿಪಡಿಸಲಾಗಿದೆ. ಆ ವೇಗದ ಮಿತಿ ಮೀರಿ ಚಾಲನೆ ಮಾಡಿದರೆ ದಂಡ ಬೀಳಲಿದೆ. ಇಷ್ಟೇ ಅಲ್ಲದೆ, ನಿಗದಿತ ಟ್ರ್ಯಾಕ್ನಲ್ಲಿಯೇ ವಾಹನಗಳು ಸಂಚರಿಸಬೇಕು. ಟ್ರ್ಯಾಕ್ ದಾಟಿ ಬಂದರೂ ಫೈನ್ ಬೀಳುವುದು ಖಚಿತವಾಗಿದೆ. ಎಷ್ಟು ವೇಗದ ಮಿತಿ:
8 ಮಂದಿಗಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ವಾಹನಗಳಿಗೆ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. 8 ಜನರಿಗಿಂತ ಅಧಿಕ ಸಾಮರ್ಥ್ಯ ಇರುವ ವಾಹನ ವೇಗದ ಮಿತಿ 80 ಕಿಮೀ ಆಗಿದೆ.
ನೈಸ್ ರಸ್ತೆಯ ಬಲ ಭಾಗದಲ್ಲಿ ಕಾರುಗಳು ಸಂಚರಿಸಬೇಕು. ಬಲ ಭಾಗದಲ್ಲಿ ಸಂಚರಿಸುವ ಕಾರಿನ ವೇಗದ ಮಿತಿ ಗಂಟೆಗೆ 120 ಕಿ.ಮೀ ಇರಬೇಕು. 121 ಕಿಮೀ ಹಾಗೂ ಅದಕ್ಕಿಂತ ಹೆಚ್ಚು ವೇಗವಾಗಿ ಸಾಗಿದರೆ ದಂಡ ಬೀಳಲಿದೆ.
ರಸ್ತೆಯ ಎಡಭಾಗದ ಟ್ರ್ಯಾಕ್ನಲ್ಲಿ ಬೈಕ್ ಹಾಗೂ ಗೂಡ್ಸ್ ವಾಹನಗಳು ಸಂಚರಿಸಬೇಕು. ಈ ವಾಹನಗಳ ವೇಗದ ಮಿತಿ ಗಂಟೆಗೆ 80 ಕಿಮೀ ಆಗಿದೆ. 81 ಕಿಮೀ ಹಾಗೂ ಅಧಿಕ ವೇಗದಲ್ಲಿ ಚಾಲನೆ ಮಾಡಿದರೆ ದಂಡ ತೆರಬೇಕಾಗಲಿದೆ. ಲೇಸರ್ ಟ್ರ್ಯಾಕ್ ಗನ್ ಸಹಾಯದಿಂದ ದಿನಕ್ಕೆ 30 ರಿಂದ 35 ಪ್ರಕರಣಗಳು ದಾಖಲಾಗುತ್ತಿವೆ.