ಬೆಂಗಳೂರು,ಡಿ.17:
ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಧಗೆ ಮತ್ತೆ ತೀವ್ರಗೊಂಡಿದೆ ಮುಂಬರುವ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾಯಿಸದಂತೆ ಹೈಕಮಾಂಡ್ ಮೇಲೆ ಒತ್ತಡ ಇರಲು ಅವರ ಆಪ್ತ ಬಣ ಮುಂದಾಗುತ್ತಿದ್ದಂತೆ ವಿರೋಧಿ ಬಣ ವಿಜಯೇಂದ್ರ ಪದಚ್ಯುತಿಗೆ ಪಟ್ಟು ಹಿಡಿದಿದೆ.
ವಿಜಯೇಂದ್ರ ಅವರನ್ನು ಬದಲಾಯಿಸದಂತೆ ವರಿಷ್ಠರ ಮೇಲೆ ಒತ್ತಡ ಹೇರಲು ಅವರ ಆಪ್ತರು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟು ಹಬ್ಬ ಆಚರಣೆ ಹೆಸರಲ್ಲಿ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದಕ್ಕೆ ಪ್ರತಿಯಾಗಿ ವಿಜಯೇಂದ್ರ ವಿರೋಧಿ ಬಣ ದಾವಣಗೆರೆಯಲ್ಲಿ ವಕ್ಫ್ ವಿರೋಧಿಸಿ ಸಮಾವೇಶ ನಡೆಸುವ ಮೂಲಕ ಶಕ್ತಿಪ್ರದರ್ಶನ ನಡೆಸಿ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿಯಲು ತೀರ್ಮಾನಿಸಿದ್ದಾರೆ.
ವಿಜಯೇಂದ್ರ ಪದಚ್ಯುತಿಗೆ ಆಗ್ರಹಿಸುತ್ತಿರುವ ಈ ಬಣ ತಮ್ಮ ಹೋರಾಟಕ್ಕೆ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರ ಬೆಂಬಲ ಪಡೆಯಲು ತೀರ್ಮಾನಿಸಿದೆ ಯಡಿಯೂರಪ್ಪ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ರಾಜ್ಯದ ಎಲ್ಲಾ ಹಿರಿಯ ನಾಯಕರುನ್ನು ಒಟ್ಟುಗೂಡಿಸಲು ಮುಂದಾಗಿದೆ.
ರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಹೋರಾಟಕ್ಕೆ ಬೆಂಬಲ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘ ಪರಿವಾರದ ಹಿನ್ನೆಲೆ ಇರುವ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ವಿಜಯೇಂದ್ರ ಬದಲಾವಣೆಗೆ ಕಾರಣವಾದ ಅಂಶಗಳನ್ನು ವಿವರಿಸಲು ಮುಂದಾಗಿದೆ
ಇದರ ಅಂಗವಾಗಿಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಭಿನ್ನಮತೀಯರ ತಂಡ ಭೇಟಿಯಾಗಿ ಶುಭ ಹಾರೈಸಿದೆ.
ರಮೇಶ್ ಜಾರಕಿಹೊಳಿ,ನೇತೃತ್ವದಲ್ಲಿ
ಶ್ರೀಮಂತ್ ಪಾಟೀಲ್, ಎನ್.ಆರ್ ಸಂತೋಷ್ ಮತ್ತಿತರರು ನಾಗ್ಪುರದಲ್ಲಿ ಫಡ್ನವಿಸ್ ಅವರನ್ನು ಭೇಟಿಯಾಗಿ ಶುಭಹಾರೈಸಿ ಕರ್ನಾಟಕ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.
ವಕ್ಫ್ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ ವಿಚಾರವನ್ನು ಗಮನಕ್ಕೆ ಜಾರಕಿಹೊಳಿ ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದೇವೆ. ದಿನಾಂಕ ನಿಗದಿಯಾದ ಬಳಿಕ ನಿಮ್ಮನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರ್ಯ ವೈಖರಿ ಕುರಿತು ಕೂಡ ಫಡ್ನವಿಸ್ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ವಿಜಯೇಂದ್ರ ಆಪ್ತ ಬಣ ಬರುವ ಫೆಬ್ರವರಿಯಲ್ಲಿ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ನೆಪದಲ್ಲಿ ಸಮಾವೇಶ ನಡೆಸುತ್ತಿದೆ ಅದಕ್ಕೂ ಮುನ್ನವೇ ದಾವಣಗೆರೆಯಲ್ಲಿ ವಕ್ಫ್ ವಿರೋಧಿ ಸಮಾವೇಶ ನಡೆಸಲು ಈ ಬಣ ತೀರ್ಮಾನಿಸಿದ್ದು ನಂತರದಲ್ಲಿ ರಾಜ್ಯದ ಇತರೆ ಕಡೆಗಳಲ್ಲೂ ಸಮಾವೇಶಗಳನ್ನು ನಡೆಸುವ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದೆ.
ಸಮಾವೇಶದ ರೂಪುರೇಷೆ ದಿನಾಂಕ ನಿಗದಿಯ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ತೀರ್ಮಾನಿಸಲು ಅಧಿಕಾರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.