ಬೆಂಗಳೂರು,
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ.ಕೆಲವು ಜಿಲ್ಲಾಧ್ಯಕ್ಷರ ನೇಮಕದ ಬೆನ್ನಲ್ಲೇ ಸ್ಪೋಟಿಸಿರುವ ಸಂಸದ ಡಾ.ಸುಧಾಕರ್, ಪಕ್ಷದ ಅಧ್ಯಕ್ಷ ವಿಜಯೇಂದ್ರ ಅಹಂಕಾರ, ದರ್ಪ ಸಹಿಸಿ ಸಾಕಾಗಿದೆ. ಇನ್ನೇನಿದ್ದರೂ ಯುದ್ಧ ಮಾಡುವುದೊಂದೇ ಬಾಕಿ ಎಂದು ಗುಡುಗಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ನನ್ನ ರಾಜಕೀಯವನ್ನೇ ಪಣಕ್ಕೊಡ್ಡಿ ಬಿಜೆಪಿಗೆ ಬಂದೆ.ಆದರೆ ವಿಜಯೇಂದ್ರ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದರು. ಈಗ ರಾಜಕೀಯವಾಗಿ ನನ್ನನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರನ್ನೂ ವಿಶ್ವಾಸಕ್ಕೆ ಪಡೆಯುವ ಗುಣ ಇವರಿಗೆ ಇಲ್ಲ.ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ ಎನ್ನುವ ಭಾವನೆ ಅವರಲ್ಲಿ ಇದೆ. ದರ್ಪ, ಅಹಂಕಾರ ಹೆಚ್ಚಿದೆ
ವಿಜಯೇಂದ್ರ ಅವರಿಗೆ ‘ಎಸ್ ಬಾಸ್’ ಎನ್ನುವವರಿಗೆ
ರಿಯಲ್ ಎಸ್ಟೇಟ್ ನಿಂದ ದುಡ್ಡು ತಂದು ಕೊಡುವವರಿಗೆ ಅವಕಾಶ ನೀಡಲಾಗುತ್ತಿದೆ.ಈ ವಿಚಾರವನ್ನು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ,ಪಕ್ಷದ ರಾಜ್ಯ ಉಸ್ತುವಾರಿ, ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು
ಇವರ ಧೋರಣೆ ಬಹಳಷ್ಟು ಮುಖಂಡರಿಗೆ ನೋವು ತಂದಿದೆ. ಇವರ ಧೋರಣೆ, ಅಹಂಕಾರಕ್ಕೆ ಧಿಕ್ಕಾರ. ಎಲ್ಲವನ್ನೂ ಸಹಿಸಿ ಕೊನೆಯ ಹಂತವಾಗಿ ಮಾಧ್ಯಮದ ಮುಂದೆ ಬಂದಿರುವೆ. ಪಕ್ಷದ ಕೇಂದ್ರ ನಾಯಕರು ನನ್ನನ್ನು ಕ್ಷಮಿಸಲಿ ಎಂದು ಹೇಳಿದರು
ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯತ್ನಾಳ್, ರಮೇಶ ಜಾರಕಿಹೊಳಿ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಅವರನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಸೇರಿ 13 ಜಿಲ್ಲೆಗಳ ಅಧ್ಯಕ್ಷರ ನೇಮಕದ ಬಗ್ಗೆ ಯಾರ ಬಳಿಯೂ ಚರ್ಚಿಸಿಲ್ಲ
ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ.ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಬೇಕೆಂಬ ದುರುದ್ದೇಶದಿಂದ ಅಡ್ಡದಾರಿ ಹಿಡಿದು ತಮಗೆ ಬೇಕಾದವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ರಾಷ್ಟ್ರೀಯ ನಾಯಕರು ಈಗಲಾದರೂ ಮಧ್ಯೆ ಪ್ರವೇಶಿಸಿ ಸರಿ ಮಾಡದಿದ್ದರೆ ಪಕ್ಷ, ಕಾರ್ಯಕರ್ತರಿಗೆ ಭವಿಷ್ಯವಿಲ್ಲ ಎಂದು ಅಳಲು ತೋಡಿಕೊಂಡರು.
Previous Articleಅನಾಥ ಕಾರಿನಲ್ಲಿ ಗರಿಗರಿ ನೋಟು
Next Article ಬಿಜೆಪಿ ನಾಯಕರಿಗೆ ಪ್ರಿಯಾಂಕ ಖರ್ಗೆ ಪ್ರಶ್ನೆ ?