ಬೆಂಗಳೂರು, ಸೆ.10-
ಅಕ್ರಮ ಆನ್ ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಬಂದಿತರಾಗಿರುವ ಕಾಂಗ್ರೆಸ್ ಶಾಸಕ ಹಾಗೂ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆಸಿ ವೀರೇಂದ್ರ ಅಲಿಯಾಸ್ ಪಪ್ಪಿ ಅವರ ಮೋಸದಾಟವನ್ನು ಕಂಡು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಚ್ಚಿದ್ದಾರೆ.
ವೀರೇಂದ್ರ ಮತ್ತು ಅವರ ಆಪ್ತರು ಹಾಗೂ ಕುಟುಂಬ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ನಗದು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ಅನೇಕ ಬ್ಯಾಂಕ್ ಲಾಕರ್ ಗಳನ್ನು ತೆರೆದು ಅವುಗಳಲ್ಲಿರುವ ಬೆಳ್ಳಿ ಬಂಗಾರದ ಗಟ್ಟಿಗಳು ನಗದು ಮತ್ತು ಆಫ್ರಿಕಾ ಆಸ್ತಿ ದಾಖಲೆಗಳ ವಿವರಗಳನ್ನು ಸಂಗ್ರಹಿಸುವ ಕಾರ್ಯ ನಾಲ್ಕು ದಿನಗಳಾದರೂ ಕೂಡ ಮುಗಿದಿಲ್ಲ.
ಇನ್ನು ವೀರೇಂದ್ರ ಅವರ ಲಾಕರ್ ನಲ್ಲಿ ದೊರೆತ ಅನೇಕ ಚಿನ್ನದ ಗಟ್ಟಿಗಳಿಗೆ ಬಂಗಾರದ ಲೇಪನ ಮಾಡಲಾಗಿದೆ 22 ಕ್ಯಾರೆಟ್ ಚಿನ್ನದ ಲೇಪನ ಹೊಂದಿರುವ ಈ ಬೆಳ್ಳಿಯ ಗಟ್ಟಿಗಳನ್ನು ಗ್ಯಾಂಬ್ಲಿಂಗ್ ನಲ್ಲಿ ಗೆದ್ದವರಿಗೆ ಚಿನ್ನದ ಗಟ್ಟಿ ಎಂದು ಕೊಟ್ಟು ಮೋಸ ಮಾಡಲು ಉದ್ದೇಶಿಸಲಾಗಿತ್ತು ಎಂಬ ಅಂಶವನ್ನು ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ
ತಮ್ಮ ಬಂಧನದಲ್ಲಿರುವ ವೀರೇಂದ್ರ ಅವರು ವಿಚಾರಣೆ ವೇಳೆ ನೀಡಿದ್ದ ಮಾಹಿತಿಯ ಆಧಾರದಲ್ಲಿ ಚಳ್ಳಕೆರೆಯಲ್ಲಿನ ಹಲವು ಬ್ಯಾಂಕ್‌ಗಳಲ್ಲಿರುವ ಲಾಕರ್‌ಗಳನ್ನು ಇ.ಡಿ ಅಧಿಕಾರಿಗಳು ಇದೇ ಸೆಪ್ಟೆಂಬರ್ 6ರಂದು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಲಾಕರ್ ಒಂದರಲ್ಲಿ 32.41 ಕೆ.ಜಿಯಷ್ಟು ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದ್ದವು ಎಂದು ಇ.ಡಿ ಅಧಿಕಾರಿಗಳು ಹೇಳಿದ್ದರು.
ತನಿಖಾಧಿಕಾರಿಗಳು ಮೊದಲಿಗೆ ಅಷ್ಟನ್ನೂ ಚಿನ್ನ ಎಂದೇ ಪರಿಗಣಿಸಿದ್ದರು. ಎಲ್ಲ ಬಿಸ್ಕತ್‌ಗಳ ಬಣ್ಣ ಭಿನ್ನವಾಗಿ ಇದ್ದುದ್ದರಿಂದ, ಕೂಲಂಕಶವಾಗಿ ಪರಿಶೀಲಿಸಲಾಯಿತು. ಅವುಗಳಲ್ಲಿ 10.98 ಕೆ.ಜಿ ತೂಕದ 11 ಬಿಸ್ಕತ್‌ಗಳು ಚಿನ್ನದ್ದಲ್ಲ ಎಂಬುದು ಗೊತ್ತಾಯಿತು. ಆ ಹನ್ನೊಂದೂ ಬೆಳ್ಳಿಯ ಬಿಸ್ಕತ್‌ಗಳಿಗೆ 22 ಕ್ಯಾರಟ್‌ನ ಚಿನ್ನದ ಲೇಪನ ಮಾಡಿರುವುದು ಪತ್ತೆಯಾಯಿತು’ ಎಂದು ಮೂಲಗಳು ತಿಳಿಸಿವೆ.
ಬೆಳ್ಳಿಯ ಬಿಸ್ಕತ್‌ಗಳಿಗೆ ಚಿನ್ನದ ಲೇಪನ ಏಕೆ ಮಾಡಲಾಗಿತ್ತು, ಅವುಗಳನ್ನು ಖರೀದಿಸಿದ್ದರೆ ಅಥವಾ ಇತರರು ಅವರಿಗೆ ನೀಡಿದ್ದರೆ ಎಂಬುದರ ತನಿಖೆ ನಡೆಯುತ್ತಿದೆ. ಅವು ಬೆಟ್ಟಿಂಗ್‌ನಲ್ಲಿ ಹಣದ ಬದಲಿಗೆ ನೀಡಿರುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿವೆ.
ಇವುಗಳ ಜತೆಗೆ, ವಜ್ರದ ಹರಳುಗಳಿದ್ದ 17 ಚಿನ್ನದ ಉಂಗುರಗಳು ಸೇರಿ 1 ಕೆ.ಜಿ.ಯಷ್ಟು ಚಿನ್ನಾಭರಣಗಳೂ ಪತ್ತೆಯಾಗಿತ್ತು. ಈ ಚಿನ್ನಾಭರಣ ಮತ್ತು ಚಿನ್ನ-ಬೆಳ್ಳಿಯ ಬಿಸ್ಕತ್ ಖರೀದಿಗೆ ಸಂಬಂಧಿಸಿದ ರಸೀದಿಗಳು, ಹಣ ವರ್ಗಾವಣೆಯ ದಾಖಲೆಗಳು ಪತ್ತೆಯಾಗಿಲ್ಲ. ಚಿನ್ನದ ಬಿಸ್ಕತ್‌ಗಳು ಹವಾಲಾ ಮೂಲಕ ಬಂದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿವೆ.
ವೀರೇಂದ್ರ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ನೋಂದಣಿಯಾಗಿರುವ ಮತ್ತಷ್ಟು ಬ್ಯಾಂಕ್ ಲಾಕರ್‌ಗಳು ಇದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿವೆ
Previous ArticleCCB ಹೆಸರಲ್ಲಿ ಪೊಲೀಸ್ ಪೇದೆ ಸುಲಿಗೆ.
Next Article ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.