ನವದೆಹಲಿ: ಅ, 01-ಲೋಕಸಭೆ ಚುನಾವಣೆಗೂ ಮುನ್ನ ಬಿಡುಗಡೆಯಾದ ಸ್ವಾತಂತ್ರ್ಯ ವೀರ ಸಾವರ್ಕರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ರೀತಿಯ ಸದ್ದು ಮಾಡದೆ ಹೋದರೂ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿತ್ತು.
ಸಿನಿಮಾ ಬಿಡುಗಡೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ದರು. ಅದರಲ್ಲೂ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಈ ಸಿನಿಮಾ ಒಂದು ಸೆನ್ಸೇಷನ್ ಆಗಲಿದೆ ಎಂದು ಬಿಂಬಿಸಿದ್ದರು ಆದರೆ ಸಿನಿಮಾ ಜನರ ಮನ ಗೆಲ್ಲುವಲ್ಲಿ ವಿಫಲವಾಗಿತ್ತು ಎಂಬುದನ್ನು ಸಿನಿಮಾದ ಕಲೆಕ್ಷನ್ ಸಾಬೀತುಪಡಿಸಿತು.
ಆದರೆ ಈ ಸಿನಿಮಾ ಕೆಲ ದಿನಗಳಿಂದ ಮತ್ತೊಂದು ರೀತಿಯಲ್ಲಿ ಸುದ್ದಿ ಮಾಡಿದ್ದು ಇದೀಗ ಅದು ಈಗ ಸುಳ್ಳು ಎಂದು ಸಾಬೀತಾಗಿದೆ.
ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರವು 2024ರ ಆಸ್ಕರ್‌ಗೆ ಅಧಿಕೃತವಾಗಿ ಭಾರತದಿಂದ ಸಲ್ಲಿಕೆಯಾಗಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದ್ದವು.
ಇದರ ಬೆನ್ನಲ್ಲೇ ಈ ಚಿತ್ರದ ನಿರ್ಮಾಣ ಮಾಡಿದವರೇ, ‘ನಮ್ಮ ಚಿತ್ರ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಅಧಿಕೃತವಾಗಿ ಆಸ್ಕರ್‌ಗೆ ಸಲ್ಲಿಕೆಯಾಗಿದೆ.ಈ ಮೆಚ್ಚುಗೆಗಾಗಿ ಭಾರತೀಯ ಚಲನಚಿತ್ರ ಒಕ್ಕೂಟಕ್ಕೆ ಧನ್ಯವಾದ’ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ಹಲವರು ಹಂಚಿಕೊಂಡಿದ್ದರು. ಮಾಧ್ಯಮಗಳೂ ವರದಿ ಮಾಡಿದ್ದವು. ಅಷ್ಟೇ ಅಲ್ಲ ಸಾವರ್ಕರ್ ಅವರ ಅಭಿಮಾನಿಗಳು ಇದು ನಿಜವಾದ ಯೋಧನಿಗೆ ಸಲ್ಲುತ್ತಿರುವ ಗೌರವವಾಗಿದೆ, ಸುಳ್ಳು ಸುದ್ದಿ ಹರಡಿದವರಿಗೆ ಆಸ್ಕರ್ ಪ್ರಶಸ್ತಿಯ ಕಿರೀಟ ಒಲಿಯುವ ಮೂಲಕ ಉತ್ತರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಿನಿಮಾ ಆಸ್ಕರ್ ಗೆ ಪ್ರವೇಶ ಪಡೆದಿದೆ ಇದಕ್ಕೆ ಪ್ರಶಸ್ತಿ ಖಚಿತವಾಗಿಯೂ ಲಭಿಸಲಿದೆ ಸಾವರ್ಕರ್ ಅವರ ವಿರೋಧಿಗಳಿಗೆ ತಕ್ಕ ಉತ್ತರವು ಸಿಗಲಿದೆ ಎಂದು ಜಾಲತಾಣಗಳಲ್ಲಿ ಸಂಭ್ರಮಿಸಿದ್ದರು.
ಆದರೆ, ವಾಸ್ತವ ಸಂಗತಿ ಹೊರಬಿದ್ದಿದೆ. ಅಸಲಿಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಸಿನಿಮಾ ಆಸ್ಕರ್ ಗೆ ಪ್ರವೇಶವನ್ನೇ ಪಡೆದಿಲ್ಲ. ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆಸ್ಕರ್-2024 ಎಂದು ಉಲ್ಲೇಖಿಸಲಾಗಿದೆ. 96ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷದ ಮಾರ್ಚ್ ತಿಂಗಳಲ್ಲೇ ನಡೆದಿದೆ. ಹೀಗಾಗಿ ಸಾವರ್ಕರ್ ಸಿನಿಮಾ ಇದರಲ್ಲಿ ಇರಲೇ ಇಲ್ಲ.
97ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ 2025ರ ಮಾರ್ಚ್ 2ರಂದು ನಡೆಯಲಿದೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಯಾವುದೇ ಅರ್ಥ ಇಲ್ಲ. ಎನ್ನುವುದು ಸಾಬೀತಾಗಿದೆ
ಅಂದಹಾಗೆ, 2025ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿರುವ ಏಕೈಕ ಚಿತ್ರ ‘ಲಪಾತಾ ಲೇಡಿಸ್’. ಇದು ನಟ ಅಮೀರ್ ಖಾನ್ ಪ್ರೊಡಕ್ಷನ್ ಹೌಸ್ ನಿಂದ ತಯಾರಾದ ಸಿನಿಮಾವಾಗಿದೆ ಇದರ ನಿರ್ದೇಶಕಿ, ಅಮೀರ್ ಖಾನ್ ಪತ್ನಿ ಬೆಂಗಳೂರಿನ ಕಿರಣ್ ರಾವ್ ಎನ್ನುವುದು ಮತ್ತೊಂದು ವಿಶೇಷ.