ಬೆಂಗಳೂರು,ಜು.22- ಜಾಮೀನು ಪಡೆದು ಜೈಲಿನಿಂದ ಹೊರಬಂದು ಎರಡು ವರ್ಷಗಳ ಹಿಂದೆ ದುಬೈಗೆ ಹಾರಿ ತಲೆಮರೆಸಿಕೊಂಡಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ (ಎಲ್‌ಇಟಿ) ಮೋಸ್ಟ್ ವಾಟೆಂಡ್ ಉಗ್ರ ಮಹಮದ್ ಜುನೈದ್‌ನ ಬಂಧನಕ್ಕೆ ಇಂಟರ್‌ಫೋಲ್‌ಗೆ ವರದಿ ಸಲ್ಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ನಾಲ್ಕು ದಿನಗಳ ಹಿಂದೆ ಶಂಕಿತ ಉಗ್ರರನ್ನು ಬಂಧಿಸಿ ನಡೆಸಿರುವ ತನಿಖೆಯಲ್ಲಿ ಕಳೆದ 2021ರಲ್ಲಿ ದುಬೈಗೆ ಜುನೈದ್ ಪ್ರಯಾಣ ಬೆಳೆಸಿರುವ ದಾಖಲೆಗಳು ಲಭ್ಯವಾಗಿದ್ದು, ಆದರೆ ಆತ ಅಲ್ಲಿಂದ ಎಲ್ಲಿಗೆ ಹೋದ ಎಂಬುದು ಖಚಿತವಾಗಿಲ್ಲ.
ಆದರೆ ಜುನೈದ್ ಭಯೋತ್ಪಾದಕರ ನೆಲೆ ಬೀಡಾಗಿರುವ ಅಪ್ಘಾನಿಸ್ತಾನ ಗಡಿ ಸೇರಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಶಂಕಿತ ಭಯೋತ್ಪಾದಕ ಜುನೈದ್ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತ ದಳ (ಐಬಿ) ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಅಲ್ಲದೆ ಇಂಟರ್‌ಪೋಲ್‌ಗೆ ಸಹ ವರದಿ ನೀಡಲಾಗಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆರ್ ಟಿನಗರದ ಜುನೈದ್ ಮೇಲೆ ಕೊಲೆ ಹಾಗೂ ರಕ್ತಚಂದನ ಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಂದು ಆತನನ್ನು ಬಂಧಿಸಿದ್ದ ಸ್ಥಳೀಯರು ಪಾಸ್‌ಪೋರ್ಟ್ ಜಪ್ತಿ ಮಾಡಿರಲಿಲ್ಲ. ಅಲ್ಲದೆ ಕೊಲೆ ಕೃತ್ಯಗಳಲ್ಲಿ ಬಂಧಿಸಿದಾಗ ಆರೋಪಿಗಳ ಪಾಸ್‌ಪೋರ್ಟ್ ವಶಕ್ಕೆ ಪಡೆಯುವುದು ಸಹ ಅಗತ್ಯವಿಲ್ಲ. ಹೀಗಾಗಿ 2020ರಲ್ಲಿ ರಕ್ತಚಂದನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ತನ್ನ ಅಸಲಿ ಪಾಸ್‌ಪೋರ್ಚ್ ಬಳಸಿಯೇ ದುಬೈಗೆ ಜುನೈದ್ ತೆರಳಿದ್ದಾನೆ.
ಪ್ರಸ್ತುತ ದುಬೈನಲ್ಲಿ ಅವಿತುಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವುದು ಖಚಿತವಾಗಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ.
ಇಂಟರ್‌ನೆಟ್ ಕಾಲ್ ಬಳಕೆ:
ವಿದೇಶದಲ್ಲಿರುವ ತನ್ನ ಇರುವಿಕೆಯ ಜಾಗ ತಿಳಿಯದಂತೆ ಎಚ್ಚರಿಕೆ ವಹಿಸಿರುವ ಜುನೈದ್, ಬೆಂಗಳೂರಿನಲ್ಲಿರುವ ತನ್ನ ಸಹಚರರು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಎಲ್‌ಇಟಿ ಶಂಕಿತ ಉಗ್ರ ನಸಿರ್ ಜತೆ ಮಾತನಾಡಲು ಇಂಟರ್‌ನೆಟ್ ಕರೆ ಬಳಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಸಂವಹನಕ್ಕೆ ಹಲವು ಆ್ಯಪ್‌ಗಳಿವೆ. ಅವುಗಳನ್ನು ಉಪಯೋಗಿಸಿ ಆತ ಇಂಟರ್‌ನೆಟ್ ಕಾಲ ಮಾಡುತ್ತಿದ್ದಾನೆ. ಇದರಿಂದ ಆತನ ಅಡಗುದಾಣ ತಿಳಿಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.