ಮಂಗಳೂರು,ಅ.14-ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಕಾರಿಗೆ ಅಡ್ಡಗಟ್ಟಿ ದುಷ್ಕರ್ಮಿಯೊಬ್ಬ ತಲವಾರು ಝಳಪಿಸಿದ ಘಟನೆ ನಿನ್ನೆ ಮಧ್ಯರಾತ್ರಿ ನಗರದ ಹೊರವಲಯದ ಫರಂಗಿಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ತೆರಳುತ್ತಿದ್ದ ಹರೀಶ್ ಪೂಂಜಾ ತನ್ನ ಕಾರನ್ನು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ರಾತ್ರಿ ತೆರಳುತ್ತಿದ್ದಾಗ ಮಾರ್ಗ ಮಧ್ಯದ ಫರಂಗಿಪೇಟೆಯಲ್ಲಿ ಕಾರನ್ನು ಹಿಂದಿಕ್ಕಿ ಅವ್ಯಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಫರಂಗಿಪೇಟೆಯ ಬಳಿ ರಾತ್ರಿ 11:30ರ ವೇಳೆಗೆ ಈ ಘಟನೆ ನಡೆದಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ದೂರಿನ ವಿವರ:
ಮಂಗಳೂರು ವಿಮಾನ ನಿಲ್ದಾಣಕ್ಕೆ ನಿನ್ನೆ ಸಂಜೆ ಆಗಮಿಸಿದ್ದ ಹರೀಶ್ ಪೂಂಜಾ ಸರ್ಕೂಟ್ ಹೌಸ್‌ಗೆ ಹೋಗಿದ್ದರು. ರಾತ್ರಿ ಅಲ್ಲಿಂದ ಶಾಸಕರು ತಮ್ಮ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರ ಕಾರಿನಲ್ಲಿ ಬೆಳ್ತಂಗಡಿಗೆ ಬರುತ್ತಿದ್ದರೆ ನಾನು ಆ ಕಾರನ್ನು ಹಿಂಬಾಲಿಕೊಂಡು ಬರುತ್ತಿದ್ದೆ.
ನಂತೂರು, ಪಡೀಲ್ ಮಾರ್ಗವಾಗಿ ಬರುತ್ತಿದ್ದಾಗ ನಾಗುರಿ ರೈಲ್ವೇ ಸೇತುವೆಯ ಬಳಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ನಾನು ಫೋನ್ ಮೂಲಕ ಶಾಸಕರಿಗೆ ಈ ವಿಚಾರ ತಿಳಿಸಿದೆ.
ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ರಾತ್ರಿ 11:15ರ ವೇಳೆ ಶಾಸಕರಿದ್ದ ಕಾರಿಗೆ ಅಡ್ಡಲಾಗಿ ಬಂದು ಚಾಲಕ ಕುಕಿತ್ ರವರನ್ನು ಉದ್ದೇಶಿಸಿ ರ.. ಮಕ್ಕಳೇ ಎಂದು ಬೈದು ತನ್ನ ಕೈಯಲ್ಲಿದ್ದ ಆಯುಧವನ್ನು ತೋರಿಸಿ ಜೀವ ಬೆದರಿಕೆ ಹಾಕಿ ಕಾರನ್ನು ರಭಸವಾಗಿ ಬಿಸಿರೋಡು ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ
Previous Articleಛೆ ! ಸ್ವಾಮೀಜಿ ಹೀಗೆಲ್ಲಾ ಮಾಡಿದ್ದಾ?
Next Article ACBಯ ಎಲ್ಲಾ ಕಡತಗಳು ಲೋಕಾಯುಕ್ತಕ್ಕೆ