ಬೆಂಗಳೂರು,ಮೇ.9-
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ, ಹಾಗೂ ನಿಷ್ಪಪಕ್ಷಪಾತ ತನಿಖೆ ಎಸ್‌ಐಟಿಯಿಂದ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಪೆನ್ ಡ್ರೈವ್ ಹಂಚಿಕೆ ಪ್ರಕರಣದ ರೂವಾರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅವರ ಅಣತಿಯಂತೆ ಇಡೀ ಪ್ರಕರಣ ನಡೆಯುತ್ತಿದೆ. ಎಸ್ಐಟಿ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕೂಡಲೇ ಅವರನ್ನು ಸಂಪುಟದಿಂದ ವಚಗೊಳಿಸಲು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಲಾಗಿದೆ.
ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದ ನಂತರ ಉಂಟಾದ ಬೆಳವಣಿಗೆಗಳು ಹಾಗೂ ವಿಧಾನಪರಿಷತ್ ಚುನಾವಣೆ ಕುರಿತಂತೆ ಪಕ್ಷದ ಕೋರ್ ಕಮಿಟಿ ಸದಸ್ಯರೊಂದಿಗೆ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನಂತರ ಜೆಡಿಎಸ್ ನ ಎಲ್ಲಾ ಶಾಸಕರು ಮತ್ತು ಕೋರ್ ಕಮಿಟಿ ಸದಸ್ಯರೊಂದಿಗೆ ರಾಜ್ಯಪಾಲ ತಾವಾರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಲೋಕಸಭೆ ಚುನಾವಣೆಯ ಮತದಾನಕ್ಕೂ ಮುನ್ನ 25,000ಕ್ಕೂ ಅಧಿಕ ಪೆನ್ ಡ್ರೈವ್ ಗಳನ್ನು ಹಾಸನದ ಬಸ್ ನಿಲ್ದಾಣ, ಉದ್ಯಾನವನ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹಂಚಿಕೆ ಮಾಡಲಾಗಿದೆ ಈ ಮೂಲಕ ಮಹಿಳೆಯರ ಘನತೆ ಗೌರವಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ರಾಜಕೀಯ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಪ್ರಕರಣವನ್ನು ಬಳಸಿಕೊಂಡಿದ್ದಾರೆ ಸಂಬಂಧವೇ ಇಲ್ಲದಿದ್ದರೂ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಕರಣದ ಜೊತೆಗೆ ಎಳೆದು ತರಲಾಗಿದೆ ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಪಡೆದು ಕೇಂದ್ರಕ್ಕೆ ರವಾನಿಸಬೇಕು ಎಂದು ಮನವಿ ಮಾಡಲಾಗಿದೆ.
ರಕ್ಷಣೆ ಬೇಕಿಲ್ಲ:
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ಹಲವು ಸಚಿವರ ವಿರುದ್ಧ ಪ್ರಹಾರ ನಡೆಸಿದರು.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಬಗ್ಗೆ ತಮ್ಮ ನಿಲುವು ಹಿಂದಿನಿಂದಲೂ ಅತ್ಯಂತ ಸ್ಪಷ್ಟವಾಗಿದೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರು ಈ ನೆಲದ ಕಾನೂನಿನಂತೆ ಶಿಕ್ಷೆಗೆ ಒಳಪಡಲೇಬೇಕು ಎಂದು ಸ್ಪಷ್ಟಪಡಿಸಿದರು.
ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಬಗ್ಗೆ ತಾವೇಂದು ಕೂಡ ಸಮರ್ಥನೆಗೆ ನಿಂತಿಲ್ಲ. ಆದರೆ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ರಾಜಕೀಯ ಕಾರಣಕ್ಕಾಗಿ ಈ ಪ್ರಕರಣವನ್ನು ಬಳಸುತ್ತಿರುವ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದೇನೆ ಎಂದು ಹೇಳಿದರು
ಶಿವಕುಮಾರ್ ಅವರು ರಾಜಕೀಯ ಕಾರಣಕ್ಕಾಗಿ ಈ ಪ್ರಕರಣವನ್ನು ಬಳಸಿಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಗೌರವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಹೀಗಾಗಿ ಇದರ ವಿರುದ್ಧ ಹೋರಾಟ ನಡೆಸುತ್ತಿದೆನೆ. ಇದಕ್ಕಾಗಿ ತಾನೆಂದೂ ತಮ್ಮ ಸಮುದಾಯದ ರಕ್ಷಣೆ ಪಡೆಯಲು ಮುಂದಾಗುತ್ತಿಲ್ಲ ಒಕ್ಕಲಿಗ ಸಮುದಾಯ ಎಂಬ ರಕ್ಷಣೆಯೊಂದಿಗೆ ಹೋರಾಟ ಮಾಡುವುದಿಲ್ಲ ಎಂದು ಹೇಳಿದರು
ಕಠಿಣ ಶಿಕ್ಷೆ:
ಈ ನಡುವೆ,ಪೆನ್ ಡ್ರೈವ್ ಪ್ರಕರಣದಲ್ಲಿ ಯಾರಾದರೂ ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸಿದರೆ ಎಸ್‌ಐಟಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಇವೆ ಎಂದು ಮಹಿಳೆಯರನ್ನು ಯಾರಾದರೂ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದರೆ ಅದನ್ನು ಎಸ್‌ಐಟಿ ಗಮನಿಸಿಕೊಳ್ಳುತ್ತದೆ. ಈ ಬಗ್ಗೆ ಸರ್ಕಾರ ಕೂಡ ಸ್ಪಷ್ಟ ಸೂಚನೆ ನೀಡಲಿದೆ ಎಂದರು.
ತನಿಖೆ ಸರಿಯಾಗಿಲ್ಲ ಎಂದು ಜೆಡಿಎಸ್ ಹೇಳಿದಾಕ್ಷಣ ಅದಕ್ಕೆ ನಾನು ಉತ್ತರ ಕೊಡಬೇಕು ಎಂದಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಪ್ರತಿ ದಿನ ಏನಾಗಿದೆ ಎಂದು ಬಹಿರಂಗವಾಗಿ ವಿವರಣೆ ನೀಡಲು ಸಾಧ್ಯವಿಲ್ಲ. ಬಹಳಷ್ಟು ವಿಚಾರಗಳು ನಮಗೇ ಗೊತ್ತಿರುವುದಿಲ್ಲ. ಎಲ್ಲದಕ್ಕೂ ಉತ್ತರ ಕೊಡುತ್ತಾ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರಕರಣದ ಬಗ್ಗೆ ನಿನ್ನೆಯೇ ನಾನು ಸಂಪೂರ್ಣ ವಿವರಣೆ ನೀಡಿದ್ದೇನೆ.ಅನೇಕ ವಿಚಾರಗಳು ಪ್ರಕ್ರಿಯೆಯ ಹಂತದಲ್ಲಿರುತ್ತವೆ. ಅದನ್ನು ವಿವರಣೆ ನೀಡುತ್ತಾ ಕೂರಲಾಗುವುದಿಲ್ಲ . ವಿರೋಧ ಪಕ್ಷಗಳು ಟೀಕೆ-ಟಿಪ್ಪಣಿ ಮಾಡುತ್ತಿವೆ. ವಕೀಲ ದೇವರಾಜೇಗೌಡ ಎಸ್‌ಐಟಿ ವಿರುದ್ಧ ದೂರು ನೀಡುವುದಾದರೆ ನೀಡಲಿ, ಏನುಬೇಕಾದರೂ ಮಾಡಿಕೊಳ್ಳಲಿ, ಆ ಬಗ್ಗೆ ತಾವು ಏನನ್ನು ಹೇಳುವುದಿಲ್ಲ ಎಂದು ಹೇಳಿದರು.