ಬೆಂಗಳೂರು,ಫೆ.12:
ನಾಯಕತ್ವ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಪರದಾಡುತ್ತಿರುವ ಬಿಜೆಪಿ ಹೈಕಮಾಂಡ್ ಇದೀಗ ಈ ಜವಾಬ್ದಾರಿಯನ್ನು ಸಂಘ ಪರಿವಾರದ ಹೆಗಲಿಗೆ ವರ್ಗಾಯಿಸಿದೆ.
ಈ ಬೆಳವಣಿಗೆಯಿಂದಾಗಿ ರಾಜ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರ ಇನ್ನು ಒಂದು ತಿಂಗಳವರೆಗೆ ಮುಂದೆ ಹೋಗುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯ ನಂತರವೇ ರಾಜ್ಯದಲ್ಲಿ ನೂತನ ಅಧ್ಯಕ್ಷರ ಆಯ್ಕೆ ಸಾಧ್ಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರ ಪದಚ್ಯುತಿಗಾಗಿ ಹೋರಾಟ ನಡೆಸುತ್ತಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಬಣದ ಜೊತೆ ಹಲವು ನಾಯಕರು ಗುರುತಿಸಿಕೊಂಡಿದ್ದಾರೆ.
ಮತ್ತೊಂದೆಡೆಯಲ್ಲಿ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರಾಗಿ ಮುಂದುವರಿಸುವಂತೆ ಅನೇಕರು ಒತ್ತಡ ಹೇರುತ್ತಿದ್ದಾರೆ. ಈ ಎರಡು ಬಣದ ನಾಯಕರನ್ನು ಒಟ್ಟಿಗೆ ಕೂಡಿಸಿ ಬಿಕ್ಕಟ್ಟು ಬಗೆಹರಿಸಲು ದೆಹಲಿಯಲ್ಲಿ ವರಿಷ್ಠರು ನಡೆಸಿದ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ತಂದು ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ಬಿಕ್ಕಟ್ಟು ಬಗ್ಗೆ ಹರಿಸುವ ಯತ್ನದ ಫಲವಾಗಿ ಭಿನ್ನಮತಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಪಕ್ಷದ ರಾಷ್ಟ್ರೀಯ ಶಿಸ್ತು ಶೋಕಾಸ್ ಜಾರಿಗೊಳಿಸಿತ್ತು. ಇದಕ್ಕೆ 72 ಗಂಟೆಯೊಳಗೆ ಉತ್ತರ ನೀಡುವಂತೆ ಯತ್ನಾಳ್ ಅವರಿಗೆ ಸೂಚನೆ ನೀಡಿತ್ತು.
ಆದರೆ ಯತ್ನಾಳ್ ಈ ಶೋಕಾಸ್ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಆತುರ ತೋರಿಲ್ಲ ಈ ನಡುವೆ ಯತ್ನಾಳ್ ಅವರಿಗೆ ಶೋಕಾಸ್ ನೀಡಿರುವ ಕ್ರಮದ ಬಗ್ಗೆ ಪಕ್ಷದ ಒಂದು ವಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಜೊತೆಗೆ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಕಾರ್ಯವೈಖರಿಯ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಇಂತಹ ಸಮಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಅದು ದೊಡ್ಡ ಪ್ರಮಾಣದ ಗೊಂದಲಕ್ಕೆ ಕಾರಣವಾಗಲಿದೆ ಎಂಬ ವರದಿಗಳು ಹೈಕಮಾಂಡ್ ಅಂಗಳವನ್ನು ತಲುಪಿವೆ.
ಈ ಬೆಳವಣಿಗೆಯಿಂದ ಒತ್ತಡಕ್ಕೆ ಸಿಲುರುವ ಪಕ್ಷದ ಹೈಕಮಾಂಡ್ ಕರ್ನಾಟಕ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುವ ಜವಾಬ್ದಾರಿಯನ್ನು ಸಂಘ ಪರಿವಾರದ ಅಂಗಳಕ್ಕೆ ವರ್ಗಾಯಿಸಿದೆ.
ಸಂಘ ಪರಿವಾರದ ಹಿರಿಯ ನಾಯಕರಾದ ಮುಕುಂದ್ , ವಿ .ನಾಗರಾಜ್ ಮತ್ತು ದತ್ತಾತ್ರೇಯ ಹೊಸ ಬಾಳೆ ಸೇರಿದಂತೆ ಇತರೆ ಪ್ರಮುಖರು ಉಭಯ ಬಣದ ನಾಯಕರನ್ನು ಕರೆದು ಮಾತನಾಡುವ ಮೂಲಕ ಎಲ್ಲಾ ಗೊಂದಲಗಳನ್ನು ಬಗೆಹರಿಸಬೇಕು ಆನಂತರ ಹೈಕಮಾಂಡ್ ನೂತನ ಅಧ್ಯಕ್ಷರ ನೇಮಕದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಈ ವೇಳೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಹೊಸವರನ್ನು ನೇಮಕ ಮಾಡುತ್ತಿದ್ದು ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಅಷ್ಟರೊಳಗೆ ರಾಜ್ಯ ಬಿಜೆಪಿಯ ಗೊಂದಲವನ್ನು ಸಂಘ ಪರಿವಾರ ಪರಿಹರಿಸಲಿದೆ ಎಂಬ ವಿಶ್ವಾಸಕ್ಕೆ ಹೈಕಮಾಂಡ್ ಬಂದಿದೆ.