ಬೆಂಗಳೂರು,ಮೇ.31:
ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡದ ಪೊಲೀಸರ ಪ್ರಶ್ನೆಗಳಿಗೆ ತತ್ತರಿಸಿ ಹೋಗಿದ್ದಾರೆ.
ಸಂತ್ರಸ್ತ ಮಹಿಳೆಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಶ್ವಾಸ ಮತ್ತು ಧೈರ್ಯ ತುಂಬುವ ನಿಟ್ಟಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಜರ್ಮನಿಯ ಮ್ಯುನಿಕ್ ನಿಂದ ಕಳೆದ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಬಂದು ಇಳಿಯುತ್ತಿದ್ದಂತೆ ಅವರನ್ನು ವಿದೇಶಾಂಗ ಇಲಾಖೆಯ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿ ಕರ್ನಾಟಕದ ಎಸ್ಐಟಿ ತಂಡಕ್ಕೆ ಹಸ್ತಾಂತರಿಸಿದರು.
ಅಲ್ಲಿಂದ ಬಿಗಿ ಭದ್ರತೆಯಲ್ಲಿಯೇ ಅವರನ್ನು ಕೇಂದ್ರ ಕಚೇರಿಗೆ ಕರೆತರಲಾಯಿತು.ಈ ವೇಳೆ ಪ್ರಜ್ವಲ್ ಅವರನ್ನು ಮಹಿಳಾ ಅಧಿಕಾರಿಗಳೇ ವಶಕ್ಕೆ ಪಡೆದುಕೊಂಡು ಅವರನ್ನು ಸುತ್ತುವರಿದಿದ್ದರು ಈ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ರಾತ್ರಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಸಿಐಡಿ ಕಚೇರಿಯಲ್ಲೇ ಉಳಿಸಿಕೊಳ್ಳಲಾಯಿತು. ಬೆಳಿಗ್ಗೆ ಪ್ರಜ್ವಲ್ ತಿಂಡಿ ಸೇವಿಸಿದ ನಂತರ ತೀವ್ರ ವಿಚಾರಣೆಗೊಳಪಡಿಸಿದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ಗೆ ಪ್ರಶ್ನೆಗಳ ಸುರಿಮಳೆಗೈದರು. ಬಳಿಕ ಅತ್ಯಂತ ಬಿಗಿ ಭದ್ರತೆಯಲ್ಲಿ
ಬೆಂಗಳೂರಿನ 42 ನೇ ಎಸಿಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್ ಶಿವಕುಮಾರ್ ಅವರ ಮುಂದೆ ಹಾಜರು ಪಡಿಸಿದರು, ಈ ವೇಳೆ ಎಸ್‌ಐಟಿ ಪರ ಎಸ್‌ಪಿಪಿ ಅಶೋಕ್ ನಾಯಕ್ ಅವರು ವಾದ ಮಂಡನೆ ಮಾಡಿದರು. 15 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನಿಡುವಂತೆ ಮನವಿ ಮಾಡಿದರು,. ಆದರೆ ನ್ಯಾಯಾಧೀಶರು 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶವನ್ನು ಹೊರಡಿಸಿದರು
ನ್ಯಾಯಾಲಯದ ಆವರಣದಿಂದ ಮತ್ತೆ ಅವರನ್ನು ಸಿಐಡಿ ಕೇಂದ್ರ ಕಚೇರಿಗೆ ಕರೆತಂದ ಪೊಲೀಸ್ ತಂಡ ವಿಚಾರಣೆ ಆರಂಭಿಸಿದ್ದು ಹಲವು ಸಿದ್ಧಪಡಿಸಿದ ಪ್ರಶ್ನೆಗಳನ್ನು ಅವರ ಮುಂದೊಡ್ಡಿತು
ಪೆನ್‌ಡ್ರೈವ್‌ನಲ್ಲಿರುವ ಫೋಟೊ, ವಿಡಿಯೋ ನಿಮದೇ?
* ಹಾಗಾದರೆ ಮೊಬೈಲ್‌ನಲ್ಲಿ ಸೆರೆಹಿಡಿದು ಅವುಗಳನ್ನು ಏಕೆ ಮೊಬೈಲ್‌ನಲ್ಲಿ ಏಕೆ ಇಟ್ಟುಕೊಂಡಿದ್ದೀರಿ?
* ಎಷ್ಟು ಮಹಿಳೆಯರ ವಿಡಿಯೋಗಳಿವೆ?
* ಅವರೆಲ್ಲಾ ನಿಮಗೆ ಹೇಗೆ ಗೊತ್ತು?
* ನಿಮ್ಮ ಮೊಬೈಲ್‌ನಲ್ಲಿ ಇರುವ ಅಶ್ಲೀಲ ಚಿತ್ರಗಳು ಹೇಗೆ ಹೊರಗೆ ಬಂದವು?
* ನಿಮ್ಮ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ನೀವೇನಾದರೂ ಅವುಗಳನ್ನು ಕೊಟ್ಟಿದ್ದೀರ?
* ಪೆನ್‌ಡ್ರೈವ್‌ಗಳು ಹೊರಗೆ ಬಂತು ಎಂದು ನಿಮಗೆ ಗೊತ್ತಾಗಿದ್ದು ಯಾವಾಗ?
* ಮುಂದೆ ನೀವೇನು ಮಾಡಿದಿರಿ?
* ಹೊಳೆನರಸೀಪುರ, ಹಾಸನದಲ್ಲಿ ನಿಮಗೆ ಮನೆಗಳಿದ್ದರೂ ಹಾಸನ ಸಂಸದರ ನಿವಾಸದಲ್ಲಿ ನೀವು ಮಲಗುತ್ತಿದ್ದುದು ಏಕೆ?
* ವಿದೇಶಕ್ಕೆ ಹೋಗಿದ್ದು ಏಕೆ?
* ನಾವು ನೋಟೀಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಲಿಲ್ಲ ಏಕೆ?
* ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿ ಪದೇಪದೇ ಕ್ಯಾನ್ಸಲ್ ಮಾಡಿದ್ದು ಏಕೆ?
* ವಿದೇಶಕ್ಕೆ ಯಾರೊಂದಿಗೆ ಹೋಗಿದ್ದಿರಿ?
* ಅಲ್ಲಿ ಎಲ್ಲಿದ್ದಿರಿ?
* ನಿಮೊಂದಿಗೆ ಯಾರು ಯಾರಿದ್ದರು? ಎಂದು ಸರಣಿ ಪ್ರಶ್ನೆಗಳನ್ನು ಎಸ್‌ಐಟಿ ಅಧಿಕಾರಿಗಳು ಕೇಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರ ತನಿಖೆ:
ಇನ್ನು ಈ ಬೆಳವಣಿಗೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ ಆದಷ್ಟು ಶೀಘ್ರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೊಬೈಲ್ ನಾಶವಾಗಿರುವ ಬಗ್ಗೆ ಬೇರೆ ಮೂಲಗಳಿಂದ ಬರುವ ಮಾಹಿತಿಯನ್ನು ನಂಬಲಾಗುವುದಿಲ್ಲ. ಎಸ್‌ಐಟಿ ಅಧಿಕಾರಿಗಳು ಹೇಳಿದರೆ ಅದು ಅಧಿಕೃತ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣದ ಬಗ್ಗೆ ಸಂತ್ರಸ್ತರು ದೂರು ನೀಡುವಂತೆ ಈಗಾಗಲೇ ಕರೆ ನೀಡಲಾಗಿತ್ತು. ಯಾರೇ ದೂರು ನೀಡಿದರೂ ಅವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿ ಬೆಳವಣಿಗೆಯಾಗುತ್ತದೆ ಎಂದು ಕಾದುನೋಡಬೇಕಿದೆ ಎಂದರು.
ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಬ್ಲೂ ಕಾರ್ನರ್ ನೋಟೀಸ್ ನೀಡಲಾಗಿತ್ತು. ಸಿಬಿಐ ಮೂಲಕ ಇಂಟರ್‌ಪೂಲ್ ಅನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಲೋಕಸಭಾ ಚುನಾವಣಾ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದ್ದು, ಹೆಚ್ಚೂ ಕಡಿಮೆಯಾದರೆ ಪ್ರಜ್ವಲ್ ರೇವಣ್ಣ ಅವರಿಗಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳ್ಳುತ್ತಿತ್ತು ಎಂದು ಹೇಳಿದರು
ಸತತ ಪ್ರಶ್ನೆಗಳ ಮೂಲಕ ಪ್ರಜ್ವಲ್ ಗೆ ಬೆಂಡೆತ್ತಿದ ಎಸ್ಐಟಿ ತಂಡ.
Previous Articleಭವಾನಿ ರೇವಣ್ಣ ಅವರಿಗೆ SIT ಮತ್ತೊಂದು ನೋಟಿಸ್.
Next Article ತ್ರಿಶೂಲ ಹಿಡಿದು ಹೊಡೆದಾಡಿದ ಅರ್ಚಕರು.