ಕೋವಿಡ್-19 ಸಂದರ್ಭದಲ್ಲಿ ಆದ ಸಾವಿನ ಕುರಿತು ಮಾಹಿತಿ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಲೇ ಇತ್ತು. ಆದರೆ ಬಿಜೆಪಿ ನೀಡಿದ ಸಾವಿನ ಸಂಖ್ಯೆಯ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ ಕೊನೆಗೂ ಡಬ್ಲ್ಯೂಎಚ್ ಓ ವರದಿ ನಿಖರ ಸಾವಿನ ಸಂಖ್ಯೆ ಹೊರಹಾಕಿದ್ದು, ವಿರೋಧ ಪಕ್ಷಕ್ಕೆ ಆಡಳಿತ ಪಕ್ಷವನ್ನು ಹಣಿಯಲು ಗಾಳ ಸಿಕ್ಕಂತಾಗಿದೆ. ಈ ವಿಚಾರವಾಗಿ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಲ್ಲಿ ಸಾವಿನ ಸುಳ್ಳು ಲೆಕ್ಕ ನೀಡಲಾಗಿದೆ. ಸುಳ್ಳು ಲೆಕ್ಕ ಕೊಟ್ಟು ಜಗತ್ತಿನ ಕಣ್ಣಿಗೆ ಕೇಂದ್ರ ಸರ್ಕಾರ ಮಣ್ಣೆರಚಿದೆ.
ಸುಳ್ಳಿನ ಬಂಡವಾಳ ಈಗ who ವರದಿಯಿಂದ ಬೆತ್ತಲಾಗಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಕೋವಿಡ್ ನಲ್ಲಿ 47 ಲಕ್ಷ ಜನ ಮೃತರಾಗಿದ್ದಾರೆ. ಆದರೆ ಕೇಂದ್ರ 4.8ಲಕ್ಷ ಎಂದು ಕೇಂದ್ರ ಸರ್ಕಾರ ದಾರಿ ತಪ್ಪಿಸಿತ್ತು. ಇನ್ನು 2ನೇ ಅಲೆಯಲ್ಲಂತೂ ದೇಶದಲ್ಲಿ ಬಹಳಷ್ಟು ಸಾವು-ನೋವುಗಳಾಗಿದ್ದವು. ಆದಾಗ್ಯೂ ಪ್ರಧಾನಿ ಮೋದಿ ಕೊರೊನಾ ಗೆದ್ದಿದ್ದೇವೆ ಎಂದು ಬಿಟ್ಟಿ ಪ್ರಚಾರ ಮಾಡಿದ್ದರು. ಇದರಿಂದ ಸಾವಿನ ಲೆಕ್ಕವನ್ನು ಮರೆಮಾಚಲಾಗಿತ್ತು. ಕೊನೆಗೂ ಈ ವಿಚಾರದಲ್ಲಿ ಈಗ ಬಹಿರಂಗವಾದ ವರದಿ ಸರ್ಕಾರದ ಸತ್ಯ ದರ್ಶನ ಮಾಡಿಸಿದೆ. ಇದರಿಂದ ಸತ್ತವರ ಶಾಪ ತಟ್ಟದೆ ಇರಲಾರದು. ಸುಳ್ಳು ಹೇಳಿ ಸತ್ಯ ಮುಚ್ಚಿಡೋಕೆ ಸಾಧ್ಯವಿಲ್ಲ. 47 ಲಕ್ಷ ಜನರ ಸಾವಿಗೆ ಕೇಂದ್ರವೇ ಹೊಣೆಯಾಗಿದೆ ಎಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಇದೇ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡ ಪ್ರತಿಕ್ರಿಯಿಸಿದ್ದು, ಸರ್ಕಾರ ಜನರನ್ನು ದಾರಿತಪ್ಪಿಸುತ್ತಿದೆ ಎಂದು ನಾವು ಆ ಸಂದರ್ಭದಲ್ಲಿ ಬಹಳಷ್ಟು ಬಾರಿ ಹೇಳಿದ್ದೆವು. ಆದರೆ ಕೊನೆಗೂ ಸರ್ಕಾರದ ಸುಳ್ಳು ಹೇಳಿಕೆ, ಡಬ್ಲ್ಯೂಹೆಚ್ ಒ ನೀಡಿದ ವರದಿಯಿಂದ ಬಹಿರಂಗವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಕ್ಷಮೆಯಾಚಿಸಬೇಕು.
47ಲಕ್ಷ ಜನರ ಸಾವಿಗೆ ಸರ್ಕಾರವೇ ಕಾರಣವಾಗಿದೆ. ಕೋವಿಡ್ ನಿಂದ ಹೆಚ್ಚಿನ ಜನ ಮೃತ ಪಟ್ಟರು. ಇದರಿಂದ ಬಿಜೆಪಿ ಬಣ್ಣ ಈಗ ಬಯಲಾಗಿದೆ. ಯಾರು ಸುಳ್ಳು ಹೇಳುತ್ತಾರೆ ಅವರ ಮೇಲೆ ಕೇಸ್ ಪ್ರಕರಣ ದಾಖಲಿಸಬೇಕು.
ಮಾಸ್ಕ್ ಹಾಕದವರ ಮೇಲೆ ಕೇಸ್ ಹಾಕಿದ್ದಾರೆ. ಹೋರಾಟ ಮಾಡಿದ ಮೇಲೆ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಈಗ ಇವರು ಜನರಿಗೆ ಸುಳ್ಳು ಹೇಳಿದ್ದಾರೆ. ಫಂಡಮಿಕ್ ಅಡಿ ಇವರ ಮೇಲೆ ಕೇಸ್ ಹಾಕಿ. ಸತ್ತವರಿಗೆ 5ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೋವಿಡ್ ನಿಂದ ಲಕ್ಷಾಂತರ ಜನ ಸತ್ತರು. ಆದರೂ who ವರದಿಯನ್ನ ಒಪ್ಪೋಕೆ ಸರ್ಕಾರಕ್ಕೆ ಹಿಂದೇಟು ಹಾಕುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.