ಬೆಂಗಳೂರು.
ಎಸ್‌ಎಂ ಕೃಷ್ಣ ಅವರು ನನ್ನನ್ನು ಮಗನ ರೀತಿ ನೋಡುತ್ತಿದ್ದರು. ರಾಜಕಾರಣದಲ್ಲಿ ಬೆಳೆಯಲು ಮಾರ್ಗದರ್ಶನ ನೀಡಿದವರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆಯವರಿಗೂ ನನಗೂ ಬಹಳ ವ್ಯತ್ಯಾಸವಿದೆ. ನಾನು ಅವರ ಕುಟಂಬದ ಸದಸ್ಯ ತೀರ ಹತ್ತಿರದಿಂದ ಅವರನ್ನು ನೋಡಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.
ಇವತ್ತು ಮುಂಜಾನೆ 3 ಗಂಟೆಗೆ ಪುತ್ರಿ ಕರೆ ಮಾಡಿ ವಿಚಾರ ತಿಳಿಸಿದಳು. ನಮ್ಮ ಕುಟುಂಬಕ್ಕೆ ಇದು ದೊಡ್ಡ ಆಘಾತ. ನಾನು ಅವರ ಕುಟಂಬದ ಒಬ್ಬ ಸದಸ್ಯ. ರಾಜಕಾರಣದಲ್ಲಿ ನಾನು ಬೆಳೆದಿದ್ದು, ಅವರು ನನ್ನನ್ನು ಬೆಳೆಸಿದ್ದು ದೊಡ್ಡ ಇತಿಹಾಸವಿದೆ ಎಂದರು.
ನನ್ನ ರಾಜಕಾರಣದ ಮೊದಲ ಗುರು. ಅವರ ಮತ್ತು ನನ್ನ ಒಡನಾಟದ ಇತಿಹಾಸವನ್ನು ಈಗ ನಾನು ಹೇಳುವುದಿಲ್ಲ. ನಾನು ಏನಾದ್ರೂ ತಪ್ಪು ಮಾಡಿದರೆ ಬಹಳ ನೊಂದು ಮಾತನಾಡುತ್ತಿದ್ದರು ಎಂದು ತಿಳಿಸಿದರು.
ಬೆಂಗಳೂರಿಗೆ ಮೆಟ್ರೋ, ವಿಮಾನ ನಿಲ್ದಾಣವನ್ನು ತಂದವರು ಅವರು. ಅವರ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ ಮೆಚ್ಚುಗೆ ಮಾತೇ ಸಾಕು ಎಂದು ಕಂಬನಿ ಮಿಡಿದರು.
ಎಸ್ ಎಂ ಕೃಷ್ಣ ಅವರು ಸಜ್ಜನ, ಸುಶಿಕ್ಷಿತ ರಾಜಕಾರಣಿ, ಅಜಾತಶತ್ರು. ದೂರದೃಷ್ಟಿಯ ಕನಸುಗಾರ. ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದವರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿನೋಡುವಂತೆ ಮಾರ್ಪಡಿಸಿದವರು. ಬೆಂಗಳೂರನ್ನು ಸಿಲಿಕಾನ್ ಸಿಟಿ, ಐಟಿ- ಬಿಟಿ ನಗರಿಯನ್ನಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ದ ಹಾಗೂ ದೂರದೃಷ್ಟಿಯ ಕೊಡುಗೆ ನೀಡಿದವರು ಎಂದು ಸ್ಮರಿಸಿದರು
ನಾಡಿನ ಹಲವು ಜನಪರ ಯೋಜನೆಗಳಿಗೆ ಅಡಿಗಲ್ಲು ಹಾಕಿದ ಪ್ರವರ್ತಕ. ಮೆಟ್ರೋ ರೈಲು, ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣದ ಹಿಂದಿನ ಶಕ್ತಿ. ಕೈಗಾರಿಕಾ ಹಾಗೂ ಕೃಷಿ ವಲಯಕ್ಕೆ ಸಮಾನ ಅವಕಾಶಗಳನ್ನು ನೀಡಿ ಅಭಿವೃದ್ಧಿಯಲ್ಲಿಯೂ ಸಮತೋಲನ ಕಾಯ್ದುಕೊಂಡ ಸಮಚಿತ್ತದ ಆಡಳಿತಗಾರ ಎಂದು ಬಣ್ಣಿಸಿದರು
ರಾಜ್ಯದ ವಿಚಾರ ಬಂದಾಗ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲಾ ಪಕ್ಷಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಸದಾ ಅಭಿವೃದ್ಧಿ, ರಾಷ್ಟ್ರ ಹಾಗೂ ರಾಜ್ಯದ ಪರವಾಗಿ ಯೋಚನೆ ಮಾಡುತ್ತಿದ್ದ ಕಾಯಕ ಜೀವಿ ಎಂದರು.
ದ್ವಾಪರಯುಗದ ಕೃಷ್ಣನ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ರಾಜಕೀಯ ಮುತ್ಸದ್ದಿಯಾಗಿ ‘ಆ’ ಕೃಷ್ಣನಂತೆ ಈ ಎಸ್.ಎಂ. ಕೃಷ್ಣ ಅವರು ನಮ್ಮ ನಡುವೆ ಬದುಕಿದವರು.ಅವರ ರಾಜಕೀಯ ಉಚ್ಛ್ರಾಯ ಕಾಲದಲ್ಲಿ ಜೊತೆಯಾಗಿ ಇದ್ದವನು ನಾನು. ನನಗೆ ರಾಜಕೀಯ ಮಾರ್ಗದರ್ಶಕರಾಗಿ ಎಡವಿದಾಗ ಕೈ ಹಿಡಿಯುತ್ತಾ, ತಪ್ಪು ಮಾಡಿದಾಗ ತಿದ್ದುತ್ತಾ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುತ್ತಾ ಪ್ರೋತ್ಸಾಹ ನೀಡುತ್ತಿದ್ದ ರಾಜಕೀಯ ದಿಗ್ದರ್ಶಕ. ಅವರ ಆಲೋಚನೆಗಳು, ಚಿಂತನೆಗಳು ಹೊಸ ಜನಾಂಗಕ್ಕೆ, ಹಳೆ ತಲೆಮಾರಿನನ್ನು ಬೆಸೆಯುವ ಕೊಂಡಿಯಾಗಿದ್ದವು ಎಂದು ಹೇಳಿದರು
Previous Articleರಾಜ್ಯದಲ್ಲಿ 3,364ಮಂದಿ ಬಾಣಂತಿಯರು ಸಾವು
Next Article ಎಸ್.ಎಂ.ಕೃಷ್ಣ ಎಂಬ ಅಜಾತಶತ್ರು.