ಬೆಂಗಳೂರು,ಮೇ24:
ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರ ಸೇವಾ ನಿವೃತ್ತಿಯ ನಂತರ ರಾಜ್ಯ ಪೊಲೀಸ್ ಹಿರಿಯ ಅಧಿಕಾರಿಗಳ ಬಡ್ತಿ ವಿಚಾರ ಇದೀಗ ವಿವಾದವಾಗಿ ಪರಿಣಮಿಸಿದೆ.
ಆರೋಪ ಪ್ರಕರಣವೊಂದರ ಇಲಾಖಾ ವಿಚಾರಣೆ ನೆಪದಲ್ಲಿ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಅವರಿಗೆ ಬಡ್ತಿ ನಿರಾಕರಿಸಲಾಗಿದೆ.
ಆದರೆ ಅವರ ವಿರುದ್ಧದ ಇಲಾಖಾ ತನಿಖೆಯು ಈಗಾಗಲೇ ತನಿಖೆ ಪೂರ್ಣಗೊಂಡಿರುವುದು ಬೆಳಕಿಗೆ ಬಂದಿದೆ.
ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ ನೀಡದ ಸರ್ಕಾರ 6 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿ ಇಲಾಖಾ ತನಿಖೆಗೆ ಆದೇಶಿಸಿದೆ.
ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಿದ್ದರೂ ಈ ತನಿಖೆ ಈಗಾಗಲೇ ಪೂರ್ಣಗೊಂಡಿರುವ ಬಗ್ಗೆ ಅಲೋಕ್ ಕುಮಾರ್ ಅವರು ಆರ್‌ಟಿಐ ಅಡಿ ಪ್ರಶ್ನಿಸಿ ಉತ್ತರ ಪಡೆದಿದ್ದಾರೆ.
ವಿಧಾನಸೌಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಇಲಾಖಾ ತನಿಖೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಮಾಹಿತಿಗಳು ಲಭ್ಯವಿದ್ದರೂ ಮುಂಬಡ್ತಿ ನೀಡದ ಸರ್ಕಾರದ ನಡೆಯಿಂದ ಬೇಸತ್ತಿರುವ ಅಲೋಕ್ ಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಹಲೋ ಕುಮಾರ್ ಅವರ ವಿರುದ್ಧದ ಆರೋಪ
ಪ್ರಕರಣದ ತನಿಖೆ ನಡೆಸಿದ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಈ ವೇಳೆ ಭಾಸ್ಕರ್ ರಾವ್ (ನಿವೃತ್ತ) ಮತ್ತು ಅಲೋಕ್ ಕುಮಾರ್ ವಿರುದ್ಧ ಇಲಾಖಾ ವಿಚಾರಣೆಗೆ ಸಿಬಿಐ ಶಿಫಾರಸು ಮಾಡಿತ್ತು. ಆದರೆ ಅಂದು ಈ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದೇ ಪ್ರಾಥಮಿಕ ಹಂತದಲ್ಲಿಯೇ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಮುಕ್ತಾಯಗೊಳಿಸಲಾಗಿದೆ.
ಪ್ರಸ್ತುತ ಇಬ್ಬರು ಅಧಿಕಾರಿಗಳ ಇಲಾಖಾ ವಿಚಾರಣೆಗೆ ಸಂಬಂಧಿಸಿದ ಕಡತಗಳು ಮುಖ್ಯಮಂತ್ರಿಯವರ ಕಚೇರಿಯಲ್ಲಿರುತ್ತದೆ.
ಇಲಾಖಾ ವಿಚಾರಣೆ ಪ್ರಾಥಮಿಕ ಹಂತದಲ್ಲಿಯೇ ಮುಕ್ತಾಯವಾಗಿದ್ದರೂ ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಲಾಖಾ ತನಿಖೆಯ ಕಾರಣ ನೀಡಿ ಮುಂಬಡ್ತಿ ನೀಡಲು ನಿರಾಕರಿಸಿದೆ.
ಈ ಹಿಂದೆ ಕೇಳಿ ಬಂದಿದ್ದ ಫೋನ್ ಟ್ಯಾಪಿಂಗ್ (ದೂರವಾಣಿ ಕದ್ದಾಲಿಕೆ) ಹಾಗೂ ಅಕ್ರಮವಾಗಿ ಮೊಬೈಲ್ ಕರೆ ವಿವರ(ಸಿಡಿಆರ್) ಪಡೆದ ಪ್ರಕರಣದಲ್ಲಿ ಅಲೋಕ್ ಕುಮಾರ್ ವಿರುದ್ಧ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ.
ಒಂದು ಡಿಜಿಪಿ ಸ್ಥಾನ ತೆರವಾದ ಹಿನ್ನೆಲೆ 1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರಿಗೆ ಈ ತಿಂಗಳಲ್ಲಿ ಡಿಜಿಪಿ ಆಗಿ ಮುಂಬಡ್ತಿ ಸಿಗಬೇಕಿತ್ತು. ಆದರೆ ಈಗ ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಇದರಿಂದಾಗಿ ಅದೇ ಬ್ಯಾಚ್‌ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗುವ ಸಾಧ್ಯತೆಯಿದೆ.