ಬೆಂಗಳೂರು,ಮೇ.13-
ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ಹೊಂದಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುವುದಿಲ್ಲ ಒಂದು ವೇಳೆ ಈ ಸರ್ಕಾರ ತನ್ನಿಂತಾನೇ ಪತನ ಹೊಂದಿದರೆ ಅದಕ್ಕೆ ತಾವು ಜವಾಬ್ದಾರರಲ್ಲ ಎಂದರು.
ಏಕನಾಥ್ ಶಿಂದೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಜವಾಬ್ದಾರಿಯುತವಾಗಿ ಮಾಧ್ಯಮದವರ ಮುಂದೆ ಹೇಳಿಕೆ ನೀಡುತ್ತಿದ್ದೇನೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಮ್ಮಿಂದ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ವಿರೋಧಪಕ್ಷದಲ್ಲಿ ಕುಳಿತುಕೊಂಡು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಷ್ಟು ಸುಲಭದ ಮಾತಲ್ಲ, ಲೋಕಸಭಾ ಚುನಾವಣೆ ನಂತರ ನಡೆಯುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾವು ಈಗಲೇ ಭವಿಷ್ಯ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ತಮಗೆ ಉತ್ತಮವಾದ ಫಲಿತಾಂಶ ಬರಲಿದೆ. ನಮ್ಮ ನಿರೀಕ್ಷೆಗೂ ಮೀರಿ ಮತದಾನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರಣಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡಿದ್ದಾರೆ. ಎಲ್ಲಾ ರಾಜಕೀಯ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಬಿಜೆಪಿ, ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.