ಬೆಂಗಳೂರು, ಜು.28:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬರೇ ಚಾಣಾಕ್ಷರು ಎಂದುಕೊಂಡಿದ್ದಾರೆ ನಾನು ಅವರಿಗಿಂತ ಚಾಣಾಕ್ಷತನ ತೋರಬಲ್ಲೆ ಎಂದು ಹೇಳಿರುವ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಹೊಣೆ ಸಿದ್ದರಾಮಯ್ಯ ಅವರದ್ದಾಗಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧ ಖಂಡಿತವಾಗಿ ಕಾನೂನಿನ ಪ್ರಕಾರವೇ ಕ್ರಮ ಆಗುತ್ತದೆ. ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನೆಲದ ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಲ್ಲ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಯೂನಿಯನ್ ಬ್ಯಾಂಕ್‌ನಲ್ಲಿ ಹಣ ವರ್ಗಾವಣೆಯಾಗಿದ್ದರೆ ಅದರ ಹೊಣೆಗಾರಿಕೆಯನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಬೇಕೇ ವಿನಃ ಫಲಾಯನ ಮಾಡಬಾರದು ಎಂದು ಹೇಳಿದರು
ನಾನು ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳುವುದಾದರೆ ಸಿದ್ದರಾಮಯ್ಯನವರು ಹಾಗೆಯೇ ಹೇಳಿಕೊಳ್ಳಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಅವರೊಬ್ಬರೇ ಚಾಣಾಕ್ಷ ಎಂದುಕೊಂಡಿದ್ದರೆ ನನಗೂ ಅದರ ಹತ್ತು ಪಟ್ಟು ಚಾಣಾಕ್ಷತನ ತೋರಿಸಲು ಬರುತ್ತದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನಾನು ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು
ಮಹರ್ಷಿ ವಾಲೀಕಿ ನಿಗಮದಲ್ಲಿ ಹಗರಣ ನಡೆದಿಲ್ಲ ಎಂದಿದ್ದರೆ ಅವರ ಸಂಪುಟದ ಸಚಿವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ? ಮತ್ತೊಬ್ಬ ಶಾಸಕರು ಇ.ಡಿ. ವಿಚಾರಣೆಯನ್ನು ಏಕೆ ಎದುರಿಸುತ್ತಿದ್ದಾರೆ? ಎಂಬ ಸತ್ಯ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು
ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಹಣವನ್ನು ದರೋಡೆ ಮಾಡಿದವರು ಯಾರು?, ಇದಕ್ಕೆ ಹೊಣೆಗಾರರು ಯಾರು? ಎಂಬುದು ಗೊತ್ತಾಗಬೇಕು. ಹಗರಣ ನಡೆದು ತಿಂಗಳಾಗಿದ್ದರೂ ಸಂಬಂಧಪಟ್ಟ ಸಚಿವರಿಂದ ರಾಜೀನಾಮೆ ನೀಡಲು ವಿಳಂಬ ಮಾಡಿದಿರಿ. ಅಧಿಕಾರಿಗಳ ತಲೆಗೆ ಕಟ್ಟಿ ಈ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿತ್ತು ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿದ್ದರೂ ಸಿದ್ದರಾಮಯ್ಯ ಒಪ್ಪಿಕೊಳ್ಳದಿರುವುದು ನನಗೆ ಆಶ್ಚರ್ಯವೇನೂ ಉಂಟುಮಾಡಿಲ್ಲ. ಏಕೆಂದರೆ ಅದು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಹಣ ಎಂಬ ಧೋರಣೆಯಿಂದ ಇದನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಈ ವರ್ಗಗಳಿಗೆ ಅನ್ಯಾಯ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಸೇರಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದೀರಿ. ನಿಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುವ ಸೌಜನ್ಯ ಇಲ್ಲವೇ ಎಂದು ಪ್ರಶ್ನಿಸಿದರು.
ಶನಿವಾರ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಬೇಕಿತ್ತು. ರಾಜ್ಯದ ಸಮಸ್ಯೆಗಳ ಬಗ್ಗೆ ಅಲ್ಲಿ ಬೆಳಕು ಚೆಲ್ಲಿದ್ದರೆ ಕರ್ನಾಟಕಕ್ಕೆ ಅನುಕೂಲವಾಗುತ್ತಿತ್ತು. ಅವರು ನೀತಿ ಆಯೋಗವನ್ನು ವೇದಿಕೆಯಾಗಿ ಬಳಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗಿಂತ ಚಾಣಾಕ್ಷರಂತೆ ನಿರ್ಮಲಾ ಸೀತಾರಾಮನ್.
Previous Articleಮಂತ್ರಿಗಳಿಗೆ DCM ಶಿವಕುಮಾರ್ ಮನವಿ.
Next Article ಕುಮಾರಸ್ವಾಮಿ ಶೀಘ್ರದಲ್ಲಿ ಸಿಎಂ ಆಗುತ್ತಾರಂತೆ.