ಬೆಂಗಳೂರು,ಆ.29:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಆಗಸ್ಟ್ 31ಕ್ಕೆ ಮುಂದೂಡಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ಪ್ರೀತಿಸಿರುವ ನಿರ್ಬಂಧ ಆಗಸ್ಟ್ 31 ರವರೆಗೆ ಮುಂದುವರೆಯಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗ ಪ್ರಸನ್ನ ಪ್ರಕಟಿಸಿದರು.
ನಿಗದಿಯಂತೆ ಇಂದು ಮಧ್ಯಾಹ್ನ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗ ಪ್ರಸನ್ನ ಅವರು, ಪರ -ವಿರೋಧದ ವಾದ ಆಲಿಸಿದರು. ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಪ್ರಕರಣದಲ್ಲಿ ರಾಜ್ಯಪಾಲರು ಆತುರಾತುರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಕೇಂದ್ರ ಮಂತ್ರಿ ಕುಮಾರಸ್ವಾಮಿ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿರುದ್ಧ ತನಿಖೆಗೆ ಅನುಮತಿ ಕೋರಿ ಸಕ್ಷಮ ತನಿಕ ಪ್ರಾಧಿಕಾರಗಳು ಸಲ್ಲಿಸಿರುವ ಮನವಿ ರಾಜ್ಯಪಾಲರ ಮುಂದೆ ಹಲವು ದಿನಗಳಿಂದ ಬಾಕಿ ಇದೆ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ತೋರಿದ ಆತುರ ಸಂಶಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು ತಮ್ಮ ನಿರ್ಧಾರಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸ್ನೇಹಮಯಿ ಕೃಷ್ಣ ಅವರು ತನಿಖೆಗೆ ಅನುಮತಿಯನ್ನೇ ಹೇಳಿಲ್ಲ. ಅಲ್ಲದೆ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಪಿ.ಸಿ. ಕಾಯ್ದೆ 17ರ ಅನ್ವಯ ಅನುಮತಿ ಬೇಕಿಲ್ಲ ಎನ್ನುತ್ತಾರೆ ಆದರೆ ರಾಜ್ಯಪಾಲರು ಇದೇ ಕಾಯಿದೆ ಅನ್ವಯ ಅನುಮತಿ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರು ನಡೆದುಕೊಂಡಿರುವ ಕ್ರಮ ಸಂಪೂರ್ಣ ಗೊಂದಲಕಾರಿ ಮತ್ತು ನಿಯಮ ಬಾಹಿರವಾಗಿದೆ ಈ ಹಿನ್ನೆಲೆಯಲ್ಲಿ ಇದನ್ನು ವಜಾ ಗೊಳಿಸಬೇಕು ಎಂದು ಕೋರಿದರು.
ಅಲ್ಲದೆ ರಾಜ್ಯಪಾಲರು ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೀಡಿದ್ದಾರೆ. ಇದನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ಸಲಹೆ ಮಾಡಿದೆ ಆದರೆ ಅದನ್ನು ತಾವು ಮಾನ್ಯ ಮಾಡುವುದಿಲ್ಲ ಎಂದು ರಾಜ್ಯಪಾಲರು ತಿಳಿಸಿರುವ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಮುಖ್ಯಮಂತ್ರಿಗಳ ಪರ ವಕೀಲರ ವಾದ ಮಂಡನೆ ಬಳಿಕ ರಾಜ್ಯಪಾಲರ ಪರವಾಗಿ ಹಿರಿಯ ವಕೀಲ ತುಷಾರ್ ಮೆಹ್ತಾ ತಮಗೆ ವಾದ ಮಂಡಿಸಲು ಶನಿವಾರದವರೆಗೆ ಸಮಯ ಬೇಕು ಎಂದು ಕೋರಿದರು ಇದನ್ನು ಮಾನ್ಯ ಮಾಡಿದ ನ್ಯಾಯ ಪೀಠ ಪ್ರಕರಣವನ್ನು ಆಗಸ್ಟ್ 31ಕ್ಕೆ ಮುಂದೂಡಿತು.
Previous Articleಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್.
Next Article ಬಳ್ಳಾರಿ ಪಾಲಾದ ಚಾಲೆಂಜಿಂಗ್ ಸ್ಟಾರ್.