ಬೆಂಗಳೂರು,ಜು.2:
ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣವಿರಾಮ ಹಾಕಿದ್ದಾರೆ.
ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಮುಖ್ಯಮಂತ್ರಿ ಯಾಗಿ ಐದು ವರ್ಷಗಳ ಕಾಲ ತಾವೇ ಮುಂದುವರೆಯುವ ಮೂಲಕ ಆಧಿಕಾರ ಅವಧಿ ಪೂರ್ಣಗೊಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಂದಿ ಬೆಟ್ಟದಲ್ಲಿ ಆಯೋಜಿಸಿರುವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರು ಭೋಗಾ ನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಯಕತ್ವದ ವಿಚಾರವಾಗಿ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿದ್ದೇವೆ ಈ ಸರ್ಕಾರ ಐದು ವರ್ಷಗಳ ಆಡಳಿತಾವಧಿ ಪೂರ್ಣಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.
ತಮ್ಮ ಅಧಿಕಾರ ಅವಧಿ ಮತ್ತು ಸರ್ಕಾರದ ಅವಧಿಯ ಬಗ್ಗೆ ಮಾತನಾಡಲು ಬಿಜೆಪಿಯ ನಾಯಕರು ಯಾರು, ಆರ್ ಅಶೋಕ್, ವಿಜಯೇಂದ್ರ ,ನಾರಾಯಣಸ್ವಾಮಿ ನಮ್ಮ ಹೈಕಮಾಂಡಾ ಎಂದು ಪ್ರಶ್ನಿಸಿದರು.
ತಾವು ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುವ ಕುರಿತಂತೆ ಅನುಮಾನ ಯಾಕೆ ಎಂದು ಕೇಳಿದ ಅವರು ಇದರಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ ತಾವು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಅವರ ಮಾತುಗಳಿಗೆ ಯಾವುದೇ ಮಾನ್ಯತೆ ಕೊಡುವುದು ಬೇಡ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ ಅವರು ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ ಎಂದು ಕೇಳಿದರು.
ಗ್ರಾಮೀಣಾಭಿವೃದ್ಧಿ ನೀರಾವರಿ ಲೋಕೋಪಯೋಗಿ ಸೇರಿದಂತೆ ಯಾವ ಇಲಾಖೆಯಲ್ಲಿ ಇವರು ಯಾವ ಸಾಧನೆ ಮಾಡಿದ್ದಾರೆ ದೊರಕಿದ್ದ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲಿ ವ್ಯಾಪಕ ಅಕ್ರಮ, ಭ್ರಷ್ಟಾಚಾರ ನಡೆಸಿದಷ್ಟೇ ಇವರ ಸಾಧನೆ ಈಗ ಅದನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆಪಾದಿಸಿದರು