ಬೆಂಗಳೂರು, ಜು.22:
ಅಸಹಜ ಲೈಂಗಿಕ ಕಿರುಕುಳ ಆರೋಪದಲ್ಲಿ ಜೈಲು ಪಾಲಾಗಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ನಾಯಕ ಸೂರಜ್ ರೇವಣ್ಣ ಅವರಿಗೆ ಜಾಮೀನು ಲಭಿಸಿದೆ.
ಇವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ತೀರ್ಪು ಕಾಯ್ದಿರಿಸಿದ್ದಬ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು,ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸೂರಜ್ ರೇವಣ್ಣಗೆ ಜಾಮೀನು ಆದೇಶ ನಾಳೆ ಬೆಳಿಗ್ಗೆ ಲಭ್ಯವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಕಾನೂನು ಕ್ರಮ ಕೈಗೊಳ್ಳಿ” ಎಂದು ಹೇಳಿ ಜೂನ್ ಎರಡನೇ ವಾರದಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರು ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ಕೈಗೊಂಡ ಪೊಲೀಸರು ಜೂನ್ 23 ರಂದು ಸೂರಜ್ ರೇವಣ್ಣನನ್ನು ಬಂಧಿಸಿದ್ದರು. ನಂತರ ಸೂರಜ್‌ನನ್ನು ನ್ಯಾಯಾಲಯ ಬಂಧನಕ್ಕೆ ಒಳಗಾಗಿದ್ದರು.
ಅವರ ವಿಚಾರಣೆ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಕರೆದಾಗ ಕಡ್ಡಾಯವಾಗಿ ಹಾಜರಾಗಬೇಕು. ತಿಂಗಳ ಪ್ರತಿ 2ನೇ ಭಾನುವಾರ ತನಿಖೆಗೆ ತನಿಖಾಧಿಕಾರಿಗಳ ಮುಂದೆ ಬರಬೇಕು. ಯಾವುದೇ ಕಾರಣಕ್ಕೂ ಸಂತ್ರಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಲೇಬಾರದು ಎನ್ನುವ ಷರತ್ತು ವಿಧಿಸಲಾಗಿದೆ.
Previous ArticleC.M.ಇಬ್ರಾಹಿಂ ಹೊಸ ರಾಜಕೀಯ ಪ್ರಯೋಗ.
Next Article ವಾಲ್ಮೀಕಿ ಹಗರಕ್ಕೆ ಸಿಕ್ಕಿದೆ ಹೊಸ ಟ್ವಿಸ್ಟ್.