ಬೆಂಗಳೂರು,ಸೆ.13:
ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿರುವ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಈಶ್ವರಪ್ಪ ದಲಿತ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಸಂಘಟನೆಗೆ ಮುಂದಾಗಿದ್ದಾರೆ.
ಈ ಹಿಂದೆ ರಾಯಣ್ಣ ಬ್ರಿಗೇಡ್ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಮರ ಘೋಷಣೆ ಮಾಡಿದ್ದ ಈಶ್ವರಪ್ಪ ಅವರು ಹೈಕಮಾಂಡ್ ಮಧ್ಯಪ್ರವೇಶದ ಮೂಲಕ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ಅಂತ್ಯಗೊಳಿಸಿದ್ದರು ಇದೀಗ ಮತ್ತೆ ಅದೇ ರೀತಿಯ ಚಟುವಟಿಕೆಗಳನ್ನು ಪುನರಾರಂಭಿಸಲು ತೀರ್ಮಾನಿಸಿದ್ದು ಬೆಂಬಲಿಗರು ಮತ್ತು ಹಿತೈಷಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಈ ಬಾರಿ ತಮ್ಮ ಸಂಘಟನೆಗೆ ರಾಯಣ್ಣ ಬ್ರಿಗೇಡ್ ಬದಲಾಗಿ ಬೇರೆ ರೀತಿಯ ಹೆಸರು ಇಡಲು ಸಿದ್ಧತೆ ನಡೆಸಿದ್ದಾರೆ. ರಾಯಣ್ಣ ಬ್ರಿಗೇಡ್ ಎಂದರೆ ಅದು ಕೇವಲ ಕುರುಬ ಸಮುದಾಯದ ಸಂಘಟನೆ ಎಂದು ಅಪಪ್ರಚಾರ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಅವರ ಹಿತೈಷಿಗಳು ಸಲಹೆ ಮಾಡಿರುವ ಹಿನ್ನೆಲೆಯಲ್ಲಿ ಈ ಸಂಘಟನೆಗೆ ಮರುನಾಮಕರಣ ಮಾಡಲು ಚಿಂತನೆ ನಡೆಸಿದ್ದು ಸಂಘಟನೆಯಲ್ಲಿ ಕೊಳಗೇರಿ ನಿವಾಸಿಗಳು ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.
ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ತಮ್ಮ ಪುತ್ರ ಕಾಂತೇಶ್ ಅವರಿಗೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಮೇಲೆ ಬೀರಿದ ಪ್ರಭಾವದ ಹಿನ್ನೆಲೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಇದರಿಂದ ಆಕ್ರೋಶಗೊಂಡ ಈಶ್ವರಪ್ಪ ಪಕ್ಷಕ್ಕೆ ಗುಡ್ ಬೈ ಹೇಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಇದೀಗ ಮತ್ತೆ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಪಕ್ಷದ ಒಂದು ವರ್ಗ ಪ್ರಯತ್ನ ನಡೆಸುತ್ತಿದೆ ಆದರೆ ಅವರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಆ ಹುದ್ದೆಯಿಂದ ನಿರ್ಗಮಿಸುವವರೆಗೆ ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿದ್ದು ಇದೀಗ ಪರ್ಯಾಯ ಸಂಘಟನೆಗೆ ಮುಂದಾಗಿದ್ದಾರೆ.
ಇದಕ್ಕಾಗಿ ಬಿಜೆಪಿ ರಾಜಕೀಯ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಜಿಎಂ ಸಿದ್ದೇಶ್ವರ್, ಪ್ರತಾಪ ಸಿಂಹ, ವಿರೂಪಾಕ್ಷಪ್ಪ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಹಿರಿಯ ಮುಖಂಡರಾದ ಮುಕುಡಪ್ಪ ಸೇರಿದಂತೆ ಹಲವು ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.
Previous Articleರಾಜ್ಯಪಾಲರ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಕ್ತಾಯ.ಸಿಎಂ ಅರ್ಜಿ ಕುರಿತು ತೀರ್ಪು ಕಾಯ್ದಿರಿಸಿದ ಹೈಕೋರ್ಟ್.
Next Article ನಕಲಿ ದಾಳಿಯ GST ಅಧಿಕಾರಿಗಳ ವಿರಾಟ್ ರೂಪ