ಬೆಂಗಳೂರು,ಆ.14:
ರಾಜ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದೀಗ ಕುತೂಹಲಕರ ಘಟ್ಟ ತಲುಪಿವೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ನಾಯಕರು ಇದೀಗ ಸೆಪ್ಟೆಂಬರ್ 15 ರಿಂದ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮತ್ತು ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಈ ಪಾದಯಾತ್ರೆ ನಡೆಯಲಿದೆ.
ಸೆಪ್ಟೆಂಬರ್ 15ರಂದು ಕೂಡಲಸಂಗಮದಿಂದ ಆರಂಭವಾಗಲಿರುವ ಪಾದಯಾತ್ರೆ ಬಳ್ಳಾರಿಯಲ್ಲಿ ಅಂತ್ಯಗೊಳ್ಳಲಿದ್ದು ಮಾಜಿ ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಜಿ.ಎಂ. ಸಿದ್ದೇಶ್ವರ್ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲ ಸಮಾನ ಮನಸ್ಕ ನಾಯಕರು ಮತ್ತು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲು ನಿರ್ಧರಿಸಿರುವ ಇವರು ಇದಕ್ಕೆ ಹೈಕಮಾಂಡ್ ಅನುಮತಿ ಪಡೆದುಕೊಳ್ಳಲು ಯತ್ನಾಳ್ ನೇತೃತ್ವದಲ್ಲಿ ಸೋಮವಾರ ನಿಯೋಗವೊಂದು ದೆಹಲಿಗೆ ತೆರಳಲಿದೆ.
ಈ ನಿಯೋಗ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಪಾದಯಾತ್ರೆಯ ಉದ್ದೇಶವನ್ನು ವಿವರಿಸಲಿದೆ ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕೂಡ ಗಮನಕ್ಕೆ ತರಲಿದೆ.
ಪಾಲ್ಗೊಳ್ಳುತ್ತೇನೆ:
ಉತ್ತರ ಕರ್ನಾಟಕದಲ್ಲಿ ನಡೆಯಲಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್
ಬಳ್ಳಾರಿ ಪಾದಯಾತ್ರೆಗೆ ಕೇಂದ್ರದ ನಾಯಕರು ಒಪ್ಪಿಗೆ ನೀಡಿದರೆ ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಇರುವುದು ನನ್ನ ಗಮನಕ್ಕೂ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರನ್ನು ಕೇಂದ್ರದ ನಾಯಕರು ಕರೆಸಿ ಈ ಹಿಂದೆಯೂ ಚರ್ಚೆ ಮಾಡಿದ್ದಾರೆ. ಈಗಲೂ ಮತ್ತೊಂದು ಸುತ್ತಿನಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಎಂದು ಎಲ್ಲರೂ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಜನರು ಕೂಡ ನಮ್ಮಿಂದ ಅದನ್ನೇ ನಿರೀಕ್ಷೆ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಉತ್ತಮವಾಗಿ ಸಾಮೂಹಿಕ ನಾಯಕತ್ವದಲ್ಲಿ ಪಾದಯಾತ್ರೆ ನಡೆದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನನಗೆ ಕರೆ ಮಾಡಿ, ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಹೇಳಿದ್ದರು. ಪಾದಯಾತ್ರೆ ಯಶಸ್ವಿಯಾಗಿರುವುದರಿಂದಲೇ ಕಾಂಗ್ರೆಸ್ ನಾಯಕರು ಭಯಕ್ಕೊಳಗಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಸರ್ಕಾರದ ಎರಡು ಹಗರಣಗಳ ವಿರುದ್ಧ ಪಾದಯಾತ್ರೆಯ ಜೊತೆಗೆ, ಕೆಲವರು ರಾಜಭವನಕ್ಕೂ ದೂರು ಸಲ್ಲಿಸಿದ್ದಾರೆ ಎಂದರು.
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಮನೆಗೆ ಹೋಗಿ ಚರ್ಚೆ ಮಾಡಲಾಗಿದೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಎನ್‌ಡಿಎ ನಿರ್ಧಾರ ಮಾಡಬೇಕಿದ್ದು, ಆ ಬಗ್ಗೆಯೂ ಮನವರಿಕೆ ಮಾಡಿಕೊಡುತ್ತೇವೆ. ಬಂಡಾಯ ಸ್ಪರ್ಧೆ ಮಾಡುವುದು ಸರಿಯಲ್ಲ. ಏಕ ಅಭ್ಯರ್ಥಿ ಸ್ಪರ್ಧಿಸುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.