ಮೈಸೂರು,ಅ.3:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿರುವ ಬೆನ್ನೆಲ್ಲೇ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದಸರಾ ಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವವರಿಗೆ ಬುದ್ಧಿ ಇಲ್ಲ ಎಂದು ಗುಡುಗಿದ್ದಾರೆ.
ಸಾರ್ವಜನಿಕ ಸಮಾರಂಭದಲ್ಲಿ ತಾವು ಮುಖ್ಯಮಂತ್ರಿ ಪರ ಎಂದು ಘೋಷಿಸಿದ ಅವರು, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರೆಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ ಎಂದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ಕಲಾವಿದ ಎಂಬ ಕಾರಣಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಎಫ್ ಐ ಆರ್ ಕಾರಣಕ್ಕೆ ರಾಜೀನಾಮೆ ಕೊಡಬೇಕು ಎಂದಾದರೆ ಎಫ್‌ಐಆರ್ ಆಗಿರೋ ಎಲ್ಲಾ ನಾಯಕರು ಕೊಡಲಿ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯೂ ಕೊಡಲಿ ಎಂದು ಸವಾಲು ಹಾಕಿದರು.
ಎಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಒಂದು ಅತ್ಯಾಚಾರ, ಕೊಲೆ ಮೂರು ತಿಂಗಳು ಮಾಧ್ಯಮ ತೋರಿಸುತ್ತೆ.ಒಂದು ಎಫ್‌ಐಆರ್ ನಾ ಎಷ್ಟು ದಿನ ತೋರಿಸುತ್ತಿರಾ? ಯಾರ ಯಾರ ಮೇಲೆ ಎಫ್ ಐ ಆರ್ ಆಗಿದೆ ಅವರೆಲ್ಲರೂ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದರು.
Previous Articleಅಧಿಕಾರ ತ್ಯಜಿಸುವ ಮಾತನಾಡಿದ ಸಿದ್ದರಾಮಯ್ಯ.
Next Article ಶಿಗ್ಗಾಂವಿಯಲ್ಲಿ ಸಿ ಎಂ ಫೈಜ್ ಎಂಬ ಮಿಂಚು