ಬೆಂಗಳೂರು,ಆ.8-
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣದ ಬಂಧಿತ ಪ್ರಮುಖ ಆರೋಪಿ
ಸತ್ಯನಾರಾಯಣ ವರ್ಮಾ, ಹಣ ವರ್ಗಾವಣೆಗೆ ಹಿಡಿದ ಮಾರ್ಗ ಅತ್ಯಂತ ರೋಚಕವಾಗಿದೆ.
ಹೈದರಾಬಾದ್ ನ ಫಸ್ಟ್ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ವರ್ಮಾ, ನಿಗಮದಲ್ಲಿದ್ದ ಕೋಟ್ಯಂತರ ರೂ ಕಬಳಿಸಲು ನಕಲಿ ಅಧಿಕಾರಿಯನ್ನು ಸೃಷ್ಟಿಸಿ, ಆತನೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ತರಬೇತಿ ನೀಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸತ್ಯನಾರಾಯಣರ ನಿರಂತರ ಸಂಪರ್ಕದಲ್ಲಿದ್ದು ನಕಲಿ ವ್ಯಕ್ತಿಯೊಂದಿಗಿನ ವ್ಯವಹಾರದ ಉಸ್ತುವಾರಿ ವಹಿಸಿದ್ದರು ಎಂಬ ಮಾಹಿತಿ ಎಸ್ ಐಟಿ ತನಿಖೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ವಸಂತನಗರದ ಯೂನಿಯನ್ ಬ್ಯಾಂಕ್ನಿಂದ ಎಂ.ಜಿ.ರೋಡ್‌ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಗೆ ನಿಗಮದ ಖಾತೆ ವರ್ಗಾವಣೆಯಾದ ಬಳಿಕ ಖಾತೆಯಲ್ಲಿದ್ದ 93 ಕೋಟಿ ಹಣ ಕಬಳಿಸಲು ವ್ಯವಸ್ಥಿತ ಸಂಚು ರೂಪಿಸಿದ್ದ ವರ್ಮಾ, ಶಿವಕುಮಾರ್ ಹೆಸರಿನಲ್ಲಿ ಆರೋಪಿ ನಕಲಿ ಆಧಾರ್ ಕಾರ್ಡ್ ಹಾಗೂ ನಿಗಮದ ಗುರುತಿನ ಚೀಟಿ ಮಾಡಿಸಿದ್ದ.
ಶಿವಕುಮಾರ್ ಹೆಸರಿನಲ್ಲಿ ಆರೋಪಿ ಸಾಯಿತೇಜ ಬ್ಯಾಂಕ್ ಖಾತೆ ತೆರೆಸಿ ಬಳಿಕ ಆರೋಪಿಗಳಾದ ಜಗದೀಶ್ ಹಾಗೂ ಚಂದ್ರಮೋಹನ್ ಎಂಬುವರು ಸಾಯಿತೇಜ ಜೊತೆ ನಿಗಮದ ಅಧಿಕಾರಿಗಳಾಗಿ ತೆರಳಿ ವರ್ಗಾವಣೆ ಸಂಬಂಧಿಸಿದ ಅರ್ಜಿ ಪಡೆದು ಪ್ರಕ್ರಿಯೆಗಳನ್ನು ಪೂರೈಸಿದ್ದರು.
ಇದಕ್ಕೂ ಮುನ್ನ ನಿಗಮದ ಅಧಿಕಾರಿಯಾಗಿ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವರ್ಮಾ ಸೂಕ್ತ ತರಬೇತಿ ನೀಡಿದ್ದ ಎಂಬುದರ ಬಗ್ಗೆ ಚಾರ್ಜ್‌ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿಗೆ ಬಂದಿದ್ದ ಸತ್ಯನಾರಾಯಣ ವರ್ಮಾ ಮೊದಲು ತನ್ನ ಸ್ನೇಹಿತ ಕಾಕಿ ಶ್ರೀನಿವಾಸನ ಜೊತೆಗೆ ಮಾತುಕತೆ ನಡೆಸಿದ್ದ. ಇದಾದ ನಂತರ ನಾಗೇಶ್ವರ ರಾವ್ ಮೂಲಕ ಸಂಬಂಧಿ ನೆಕ್ಕಂ ಟಿ ನಾಗರಾಜನನ್ನು ಸಂಪರ್ಕಿಸಿದ್ದ. ಈ ಮೂಲಕ ನಿಗಮದ ಎಂ.ಡಿ ಪದ್ಮರಾಜ ಅವರನ್ನು ಭೇಟಿ ಮಾಡಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಬಗ್ಗೆ ಚರ್ಚಿಸಿದ್ದರು.
ಪ್ರಕರಣದ ಏಳನೇ ಆರೋಪಿ ಚಂದ್ರಮೋಹನ್ ಮೂಲಕ ಎಂಜಿ ರಸ್ತೆ ಶಾಖೆಯ ಯೂನಿಯನ್ ಬ್ಯಾಂಕ್ನ ಖಾತೆಯಲ್ಲಿರುವ ಹಣ ಮಾಹಿತಿ ಪಡೆದು ನಂತರ ವಸಂತ ನಗರ ಶಾಖೆಯಲ್ಲಿ ಅಕೌಂಟ್ ತೆರೆದು 89.62.99.500 ಹಣವನ್ನು ವರ್ಗಾಯಿಸಿಕೊಂಡಿದ್ದರು ಎಂಬುದರ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ
Previous Articleಮಹಾರಾಷ್ಟ್ರದಲ್ಲಿತ್ತು ಡ್ರಗ್ಸ್ Factory.
Next Article ಬೆಂಗಳೂರಿನಲ್ಲಿ ಹುಡುಗಿಯರೇ ಹೆಚ್ಚು ನಾಪತ್ತೆ.