ಬೆಂಗಳೂರು,ಮಾ.29-
ತಮ್ಮನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಪಿತೂರಿ ನಡೆಸಲಾಗಿದೆ ಎಂದು ಸಹಕಾರ ಮಂತ್ರಿ ಕೆ. ಎನ್ .ರಾಜಣ್ಣ ಆರೋಪಿಸಿರುವ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಈ ಸಂಬಂಧ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ರಾಜಣ್ಣ ಅವರಿಗೆ ಸೂಚಿಸಿದೆ.
ಆದರೆ ತಕ್ಷಣವೇ ವಿಚಾರಣೆಗೆ ಹಾಜರಾಗಲು ನಿರಾಕರಿಸಿರುವ ರಾಜಣ್ಣ ರಂಜಾನ್ ಮತ್ತು
ಯುಗಾದಿ ಹಬ್ಬದ ನಂತರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದು ಇದಕ್ಕೆ ಸಮಯವಕಾಶ ನೀಡುವಂತೆ ಸಿಐಡಿ ಅಧಿಕಾರಿಗಳಿಗೆ ವಿನಂತಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಸಚಿವರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲು ಅಧಿಕಾರಿಗಳು ಮಾಡಿದ್ದ ಕರೆ ಸ್ವೀಕರಿಸಿದ ರಾಜಣ್ಣ ಅವರು, ಯುಗಾದಿ ಹಾಗೂ ಹೊಸ ತೊಡಕು ಮುಗಿದ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ, ಪ್ರಕರಣದ ಬಗ್ಗೆ ವಿವರ ಕೊಡುತ್ತೇನೆ ಎಂದು ಸಮಯಾವಕಾಶ ಕೋರಿದ್ದಾರೆ.
ಇದಕ್ಕೆ ಸಮ್ಮತಿಸಿದ ಅಧಿಕಾರಿಗಳು, ಯುಗಾದಿ ನಂತರ ವಿಚಾರಣೆ ಚುರುಕುಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹನಿಟ್ರ್ಯಾಪ್ ಯತ್ನ ಕುರಿತು ವಿಚಾರಣೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು, ನಗರದಲ್ಲಿರುವ ಸಚಿವರ ಸರ್ಕಾರಿ ಅಧಿಕೃತ ನಿವಾಸಕ್ಕೆ ತೆರಳಿ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದ್ದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣದ ವಿಚಾರಣೆಯನ್ನು (ತನಿಖೆ ಅಲ್ಲ) ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿದೆ. ಈಗಾಗಲೇ ಸಿಐಡಿ ವಿಚಾರಣೆ ಆರಂಭಿಸಿದ್ದು, ಈ ಪ್ರಕರಣದಲ್ಲಿ ವಿವರಣೆ ಪಡೆಯುವ ಸಂಬಂಧ ಸಚಿವರಿಗೆ ನೋಟಿಸ್ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಸಚಿವ ರಾಜಣ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು.
Previous Articleವಿಜಯೇಂದ್ರ ಬದಲಾಗಲೇ ಬೇಕಂತೆ.
Next Article ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ