ಬೆಂಗಳೂರು,ಮಾ.27:
ರಾಜ್ಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ,
ಹನಿ ಟ್ರ್ಯಾಪ್ ಯತ್ನ ಆರೋಪ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಗೊಂಡಿದೆ.
ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿರುವ ಅಧಿಕೃತ ನಿರ್ಧಾರ ಇನ್ನು ಹೊರಬಂದಿಲ್ಲ. ಆದರೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಸೂಚನೆಯ ಮೇರೆಗೆ ಸಿಐಡಿ ಅಧಿಕಾರಿಗಳು ಈ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಸಿಐಡಿ ಅಧಿಕಾರಿಗಳ ತಂಡ ಸಹಕಾರ ಮಂತ್ರಿ ಕೆ.ಎನ್. ರಾಜಣ್ಣ ಅವರಿಗೆ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿ ನೀಡಲಾಗಿರುವ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸರ್ಕಾರಿ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಯ ವಿವರ ಸಂಗ್ರಹಿಸಿರುವ ಅಧಿಕಾರಿಗಳ ತಂಡ ಕಳೆದ ನಾಲ್ಕು ತಿಂಗಳಿನಿಂದ ಈ ಮನೆಗೆ ಯಾರು ಯಾರು ಬಂದಿದ್ದರು ಎಂದು ಕೇಳಿ ಅವರ ವಿವರ ಸಂಗ್ರಹಿಸಿದೆ.
ಸರ್ಕಾರಿ ನಿವಾಸದ ಭದ್ರತಾ ಅಧಿಕಾರಿ ಬಳಿ ಇರುವ ಡೈರಿಯನ್ನು ಪಡೆದುಕೊಂಡಿರುವ ತಂಡ ಅದರಲ್ಲಿ ನಮೂದಾಗಿರುವ ಹೆಸರುಗಳು ಮತ್ತು ಅವರ ದೂರವಾಣಿ ಸಂಖ್ಯೆಗಳನ್ನು ಕೂಡ ಪಡೆದುಕೊಂಡಿದೆ.
ಈ ಪ್ರಾಥಮಿಕ ವರದಿಯನ್ನು ಅಧಿಕಾರಿಗಳ ತಂಡ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಲಿದ್ದು ಅದಾದ ಬಳಿಕ ಪ್ರಕರಣದ ಬಗ್ಗೆ ಯಾವ ತನಿಖೆ ನಡೆಸಬೇಕು ಎಂಬ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಆ ತಂಡಕ್ಕೆ ಸಿಐಡಿ ಅಧಿಕಾರಿಗಳು ತಾವು ಸಂಗ್ರಹಿಸಿರುವ ಎಲ್ಲ ವಿವರಗಳನ್ನು ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನಸಭೆಯ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರು ರಾಜ್ಯದಲ್ಲಿ ತಾವು ಸೇರಿದಂತೆ ಕೆಲವು
ಮಂತ್ರಿಗಳು ಶಾಸಕರು ಮತ್ತು ಪ್ರತಿಪಕ್ಷಗಳ ಮುಖಂಡರು ಸೇರಿದಂತೆ 48 ಜನ ಪ್ರಮುಖ ನಾಯಕರನ್ನು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ವ್ಯವಸ್ಥಿತವಾಗಿ ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದರು.
ಇದಾದ ಬಳಿಕ ಮುಖ್ಯಮಂತ್ರಿಗಳ ಸಲಹೆಯಂತೆ ತಮ್ಮನ್ನು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ನಡೆಸಿದ ಪ್ರಯತ್ನದ ಕುರಿತ ಲಿಖಿತ ದೂರನ್ನು ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ನೀಡಿದ್ದಾರೆ ಪರಮೇಶ್ವರ್ ಅವರು ಈ ದೂರನ್ನು ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಿದ್ದು ಇದರ ಕುರಿತು ಯಾವ ಬಗೆಯ ತನಿಖೆ ಸೂಕ್ತ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ
