ಬೆಂಗಳೂರು, ಜ.27:
ಪ್ರತಿ ವರ್ಷ ಜನವರಿ ಒಂದರಂದು ಮನೆ ಮತ್ತು ಕಚೇರಿಗಳ ಗೋಡೆ ಅಲಂಕರಿಸುವ ಕ್ಯಾಲೆಂಡರ್ ಗಳು ದಿನಾಂಕ ಹಾಗೂ ಪಂಚಾಂಗದ ವಿಶೇಷದ ಜೊತೆಗೆ ಆರ್ಷಕ ಚಿತ್ರಗಳ ಮೂಲಕ ಗಮನ ಸೆಳೆಯುತ್ತವೆ.
ಬಹುತೇಕ ಪ್ರತಿಯೊಬ್ಬರ ಮನೆ, ಕಚೇರಿಗಳಲ್ಲಿ ನೋಡ ಸಿಗುವ ಈ ಕ್ಯಾಲೆಂಡರ್ ಗಳನ್ನು ಆಕರ್ಷಕವಾಗಿ ಗಮನ ಸೆಳೆಯುವಂತೆ ಮಾಡಲು ನಾನಾ ಕಸರತ್ತು ಮಾಡಲಾಗುತ್ತದೆ.
ಇಂತಹ ಪ್ರಯತ್ನದ ಫಲವಾಗಿ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2025ರ ನೂತನ ವರ್ಷದ ಕ್ಯಾಲೆಂಡರ್ ರೂಪಿಸಿದ್ದು ಪ್ರತಿ ಪುಟಗಳಲ್ಲೂ ಇತಿಹಾಸವನ್ನು ತೆರೆದಿಡುತ್ತದೆ.
ವಜ್ರಮಹೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರು ಜಲಮಂಡಳಿಯು ಸಾರ್ಥಕ 60 ಸಾಧನೆ ಮತ್ತಷ್ಟು ಎಂಬ ಘೋಷವ್ಯಾಕ್ಯದೊಂದಿಗೆ ಕ್ಯಾಲೆಂಡರ್ ಹೊರತಂದಿದೆ.
ಈ ಕ್ಯಾಲೆಂಡರ್ ನಲ್ಲಿ ಬೆಂಗಳೂರು ಎಂಬ ಮಾಯಾನಗರಿಗೆ 1896ರಿಂದ ಹೆಸರಘಟ್ಟದಿಂದ ಹಾಗೂ 1933ರ ತಿಪ್ಪೆಗೊಂಡನಹಳ್ಳಿಯಿಂದ ನೀರು ಸರಬರಾಜಿನ ಅಪರೂಪದ ಚಿತ್ರಗಳು, 1964ರಲ್ಲಿ ಜಲಮಂಡಳಿ ಸ್ಥಾಪನೆ, ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಮೊದಲ ಹಂತದ ಯೋಜನೆಯಿಂದ ಹಿಡಿದು ಕಾವೇರಿ ಐದನೇ ಹಂತದ ಯೋಜನೆಯವರೆಗಿನ ಚಿತ್ರ ಮತ್ತು ವಿವರಗಳಿವೆ.
ಮಳೆ ನೀರು ಸುಗ್ಗಿ ,ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಅಪರೂಪದ, ಅತ್ಯಾಕರ್ಷಕ ಚಿತ್ರಗಳನ್ನು ಸದರಿ ಕ್ಯಾಲೆಂಡರ್ ಒಳಗೊಂಡಿದೆ. ಬೆಂಗಳೂರಿಗೆ ಸಮರ್ಪಕ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ವಿವರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಕೆ.ಸುಧಾಕರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಮಂಡಳಿಯ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜನಿಯರ್ ಸುರೇಶ,ಮುಖ್ಯ ಎಂಜನಿಯರ್ ಗಳು,ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ.ಮರಿಯಪ್ಪ,ಪ್ರಧಾನ ಕಾರ್ಯದರ್ಶಿ ಗೋವಿಂದರಾಜಲು ಸೇರಿದಂತೆ ಅಧಿಕಾರಿಗಳು ಇದ್ದರು.
Previous Articleಮುಂದಿನ ತಿಂಗಳಿನಿಂದ ಶಿವರಾಜ್ ಕುಮಾರ್ ಶೂಟಿಂಗ್ ಗೆ
Next Article ಸಾಲ ವಾಪಸ್ ಕೇಳಿದರೆ ಮೂರು ವರ್ಷ ಜೈಲು