ಬೆಂಗಳೂರು, ನ.16-ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಖತರ್ನಾಕ್ ಕೊಲೆಗಾರನನ್ನು ಎಂ-ಸಿಸಿಟಿಎನ್‍ಎಸ್ ಮೊಬೈಲ್ ಅಪ್ಲಿಕೇಷನ್ ನ ಬೆರಳು ಮುದ್ರೆ ಮೂಲಕ ಪತ್ತೆ ಮಾಡುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರದ ರಮೇಶ್ (35)ಬಂಧಿತ ಆರೋಪಿಯಾಗಿದ್ದು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಇತ್ತೀಚೆಗೆ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಂ-ಸಿಸಿಟಿಎನ್‍ಎಸ್ ಮೊಬೈಲ್ ಆಫ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್‍ಅನ್ನು ವಿತರಣೆ ಮಾಡಲಾಗಿದೆ. ಈ ಡಿವೈಸನ್ನು ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಯನ್ನು ಪರಿಶೀಲಿಸಿದರೆ ಆ ವ್ಯಕ್ತಿಯು ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಮಾಹಿತಿ ತಿಳಿದು ಬರುತ್ತದೆ.
ಅದರಂತೆ ಯಶವಂತಪುರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜು ಸಿ. ಅವರು ಸಿಬ್ಬಂದಿಯ ಜೊತೆ ನಿನ್ನೆ ರಾತ್ರಿ ಗಸ್ತಿನಲ್ಲಿದ್ದಾಗ ಬಿ.ಕೆ.ನಗರದ 1ನೇ ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಮೇಶ್ ನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ವಿಚಾರಣೆ ಮಾಡಿ, ಎಂ-ಸಿಸಿಟಿಎನ್‍ಎಸ್ ಮೊಬೈಲ್ ಆಫ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದ್ರೆಯನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಮಾಹಿತಿ ಪೊಲೀಸರ ದತ್ತಾಂಶದಲ್ಲಿರುವುದು ದೃಢಪಟ್ಟಿರುತ್ತದೆ.
ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ದತ್ತಾಂಶದಲ್ಲಿ ಪರಿಶೀಸಲಾಗಿ ಆತ 2005 ಆ. 29
ರಂದು ತಾವರೆಕೆರೆಯ ತಿಗಳರಪಾಳ್ಯ, ಬಾಲಾಜಿ ನಗರದಲ್ಲಿನ ಮನೆಯೊಂದಕ್ಕೆ ಬಣ್ಣ ಒಡೆಯಲು ಬಂದ ವ್ಯಕ್ತಿಗಳು ಮನೆಗೆ ಬಣ್ಣ ಒಡೆಯದೇ ಅದೇ ಮನೆಗೆ 8-10 ಜನ ಹುಡುಗರನ್ನು ಸೇರಿಸಿಕೊಂಡು ಮನೆಯ ಮಾಲೀಕರು ಮನೆಯ ಕೀ ಕೇಳಿದಾಗ ಮನೆಯ ಕೀ ಕೊಡೆದೆ ಗಲಾಟೆ ಮಾಡಿ ಮನೆಯ ಮಾಲೀಕರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಪತ್ತೆಯಾಗಿದೆ.
ಆರೋಪಿಯು ದಸ್ತಗಿರಿಯಾಗಿ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರ ಬಂದು 2010 ನೇ ಸಾಲಿನಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಆರೋಪಿಯ ವಿರುದ್ಧ ಉದ್ಘೋಷಣೆ ಹಾಗ ದಸ್ತಗಿರಿ ವಾರೆಂಟ್ ಹೊರಡಿಸಿರುವುದರಿಂದ ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರ ವಶಕ್ಕೊಪ್ಪಿಸಲಾಗಿದೆ ಎಂದು ತಿಳಿಸಿದರು.