ಬೆಂಗಳೂರು,ಜು.7:
ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಅಡ್ಡ ಪರಿಣಾಮಗಳಿಂದಾಗಿ ಹೃದಯಘಾತ ಪ್ರಕರಣಗಳು ಹೆಚ್ಚುತ್ತಿದೆ ಎಂಬ ವರದಿಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಳ್ಳಿ ಹಾಕಿದ್ದಾರೆ.
ಹೃದಯಾಘಾತಗಳಿಗೆ ಜನರ ಜೀವನಶೈಲಿ ಕಾರಣವಾಗಿದೆ. ಕೋವಿಡ್ ಲಸಿಕೆಯೇ ಹೃದಯಾಘಾತಕ್ಕೆ ಕಾರಣ ಎಂದು ಎಲ್ಲಿಯೂ ತಿಳಿದುಬಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನ ನಡೆದಿದೆ. ಲಸಿಕೆಯಿಂದ ಜನರಿಗೆ ಒಳ್ಳೆಯದಾಗಿದೆ. ಬಹಳಷ್ಟು ಜನರ ಜೀವ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನ, ತುಮಕೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೃದ್ರೋಗಗಳಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳ ಬಗ್ಗೆ ಅಧ್ಯಯನಕ್ಕಾಗಿ ರಚಿಸಲಾಗಿದ್ದ ತಜ್ಞರ ಸಮಿತಿ ವರದಿಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ನೀಡಲಾದ ಎಂಆರ್‌ಎನ್‌ಎ ಲಸಿಕೆಯ ಬಗ್ಗೆ ಒಂದಿಷ್ಟು ಅನುಮಾನಗಳಿವೆ. ಆದರೆ ಅದನ್ನು ನಮ ದೇಶದಲ್ಲಿ ನೀಡಲಾಗಿಲ್ಲ ಎಂದರು.ಜನಸಾಮಾನ್ಯರಲ್ಲಿದ್ದ ಅನುಮಾನವನ್ನು ಬಗೆಹರಿಸುವ ಸಲುವಾಗಿಯೇ ಮುಖ್ಯಮಂತ್ರಿಯವರು ತಂತ್ರಜ್ಞರ ಸಮಿತಿಯನ್ನು ರಚಿಸಿದ್ದರು. ಅಧ್ಯಯನ ನಡೆಸಿದ ಸಮಿತಿಯು ಲಸಿಕೆಯ ಕಾರಣದಿಂದ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಚಿಕ್ಕವಯಸ್ಸಿನವರಲ್ಲಿ ದಿಢೀರ್ ಹೃದಯಾಘಾತವಾಗುತ್ತಿವೆ. ನಡೆದು ಹೋಗುವಾಗ, ವ್ಯಾಯಾಮ ಮಾಡುವಾಗ ಹಠಾತ್ ಮರಣಗಳಾಗುತ್ತಿವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಜ್ಞರ ಸಮಿತಿ ಹೇಳಿದೆ. ಸಮಿತಿಯ ಶಿಫಾರಸು ಆಧಾರದ ಮೇಲೆ ಸರ್ಕಾರ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.
ಹಠಾತ್ ಸಾವಿಗೆ ಕಾರಣವಾಗುವ ಹೃದ್ರೋಗವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸುತ್ತಿದ್ದು, ಹೃದಯ ಸಂಬಂಧದ ಕಾಯಿಲೆಗಳನ್ನು ತಪ್ಪಿಸಲು ಶಾಲೆಗಳಲ್ಲಿ ,ಸರ್ಕಾರಿ ನೌಕರರು, ಗುತ್ತಿಗೆ ನೌಕರರಿಗೆ ವಾರ್ಷಿಕ ನಿಯಮಿತ ತಪಾಸಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆಸ್ಪತ್ರೆಯ ಹೊರಗಡೆ ಹಠಾತ್ ಮರಣಗಳನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗುತ್ತಿದ್ದು, ಆ ಸಾವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆಗೊಳಪಡಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಲು ತಪಾಸಣೆಯನ್ನು ವ್ಯಾಪಕಗೊಳಿಸಲಾಗುತ್ತದೆ. 15 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೊಮೆಯಾದರೂ ಹೃದಯದ ತಪಾಸಣೆ ನಡೆಸಲಾಗುವುದು. ಹುಟ್ಟಿನಿಂದಲೇ ಬಂದಿರುವ (ಕಾಂಜಿನೇಟಲ್ ಡಿಸೀಸ್) ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು. ಆರ್‌ಬಿಎಸ್ ಯೋಜನೆಯಡಿ ಹಲವು ರೀತಿಯ ತಪಾಸಣೆಗಳಿದ್ದು, ಹೃದಯ ಸಂಬಂಧಿ ತಪಾಸಣೆಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದರು.
Previous Articleಬೆಂಗಳೂರಿನ ಎಲ್ಲಾ Bar Pub ಗಳ CCTV ಮೇಲೆ ಪೊಲೀಸ್ ಕಣ್ಣು.
Next Article ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ