ಮಂಡ್ಯ,ಸೆ.5-ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣವನ್ನು ಬೇಧಿಸಿದ್ದ ಪೊಲೀಸರು ಕೊನೆಗೂ ಪ್ರಕರಣದ ಕಿಂಗ್‌ಪಿನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಗ್ಯ,ಪೊಲೀಸ್ ಇಲಾಖೆಗೂ ಚಳ್ಳೆಹಣ್ಣು ತಿನ್ನಿಸಿ ದಂಧೆ ವಿಸ್ತರಿಸಿದ್ದ ಚಾಲಾಕಿ ಅಭಿಷೇಕ್ ಬಂಧಿತ ಆರೋಪಿಯಾಗಿದ್ದಾನೆ, ಕಿಂಗ್‌ಪಿನ್ ಅಭಿಷೇಕ್ ಜೊತೆ ವಿರೇಶ್ ಸೇರಿ 12 ಮಂದಿ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಳ್ಳಲಾಗಿದೆ.
ಬಂಧಿತರಿಂದ 2 ಸ್ಕ್ಯಾನಿಂಗ್ ಮಷಿನ್, 3 ಕಾರು, ಮೊಬೈಲ್ ಸೇರಿ 23 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ದಂಧೆಯ ಕಿಂಗ್‌ಪಿನ್ ಸೇರಿ ಪ್ರಕರಣ ಭೇದಿಸಲು ಏಳು ತಂಡ ರಚನೆ ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯರ ಬಂಧನಕ್ಕೂ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಪೊಲೀಸರಿಗೆ ಅಚ್ಚರಿ:
ಬಂಧಿತ ಆರೋಪಿ ಅಭಿಷೇಕ್ನ ಜಾಲ, ತಂತ್ರಗಾರಿಗೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತನ್ನದೇ ನೆಟ್‌ವರ್ಕ್ ಮೂಲಕ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೇಯ ಕೃತ್ಯ ನಡೆಸುತ್ತಿದ್ದ ಈತ ಪೊಲೀಸರಿಗೆ ಯಾಮಾರಿಸಲು ಮೊಬೈಲ್ ಬದಲು ಇಂಟರ್ನೆಟ್ ಕಾಲ್ ಬಳಕೆ ಮಾಡುತ್ತಿದ್ದ. ಹಾಡ್ಯ ಗ್ರಾಮದ ಆಲೆಮನೆ ಕೇಸ್‌ನಲ್ಲಿ ಸಿಐಡಿ ಕೈಗೂ ಸಿಗದೆ ದಂಧೆ ವಿಸ್ತರಣೆ ಮಾಡಿದ್ದ
ಆಲೆಮನೆ ಪ್ರಕರಣವನ್ನೇ ಬಳಸಿಕೊಂಡು ಡಿಮ್ಯಾಂಡ್ ಕ್ರಿಯೇಟ್ ಮಾಡಿ ಒಂದು ಹೆಣ್ಣು ಭ್ರೂಣಹತ್ಯೆಗೆ 25 ಸಾವಿರದಿಂದ 1 ಲಕ್ಷ ರೂ.ವರೆಗೆ ಹಣ ಪಡೆಯುತ್ತಿದ್ದ ಆರೋಪಿಯು ಆಲೆಮನೆ, ಪಾಂಡವಪುರ ಹೆಲ್ತ್ ಕ್ವಾಟರ್ಸ್ ಕೇಸ್ ಸೇರಿದಂತೆ 5 ಪ್ರಕರಣಗಳಲ್ಲಿ ಬೇಕಾಗಿದ್ದ.ವೈದ್ಯರೊಬ್ಬರಿಂದ ಸ್ಕ್ಯಾನಿಂಗ್ ಯಂತ್ರ ಖರೀದಿಸಿ,ಅದರಲ್ಲಿಯೇ ನಡೆಸುತ್ತಿದ್ದ
ಸ್ಕ್ಯಾನಿಂಗ್‌ನಲ್ಲಿ ಹೆಣ್ಣು ಭ್ರೂಣ ಪತ್ತೆಯಾದರೆ, ಮಾತ್ರೆ ಬಳಸಿ ಭ್ರೂಣ ಹತ್ಯೆ ಮಾಡಲಾಗಿತಿತ್ತು. ಬಳಿಕ ಕರುಳಬಳ್ಳಿ ಹೊರೆ ತೆಗೆದು ಮೆಡಿಕಲ್ ತ್ಯಾಜ್ಯದೊಂದಿಗೆ ಎಸೆಯುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.