ಬೆಂಗಳೂರು,ಫೆ.18:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ತಕ್ಷಣವೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಿ ಸಮರ್ಥರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.
ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ ತಮಗೆ ನೀಡಿದ್ದ ಶೋಕಾಸ್ ನೋಟಿಸ್ ಗೆ ಉತ್ತರ ನೀಡಿರುವ ಯತ್ನಾಳ್ ಅವರು, ವಿಜಯೇಂದ್ರ ವಿರುದ್ಧ ಆರೋಪಗಳ ಸರಮಾಲೆಯನ್ನೇ ಪೋಣಿಸಿದ್ದಾರೆ.
ಶಿಸ್ತು ಸಮಿತಿ ನೋಟಿಸ್ ಗೆ 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಿತ್ತು. ನೋಟಿಸ್ ದೊರೆತ ಮರುದಿನವೇ ಅವರು ಐದು ಪುಟಗಳಷ್ಟು ವಿವರವಾದ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಅವರು ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಏಕ ಪಕ್ಷಿಯವಾಗಿ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಪಕ್ಷವನ್ನು ಸ್ವಂತ ಸಂಸ್ಥೆಯ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಲವಾರು ಅಕ್ರಮಗಳ ಸುಳಿಯಲ್ಲಿ ಸಿಲುಕಿದೆ ಇದರ ವಿರುದ್ಧ ಬಿಜೆಪಿ ಕೈಗೊಂಡ ಎಲ್ಲ ಹೋರಾಟಗಳು ವಿಫಲವಾಗಿವೆ. ಇದಕ್ಕೆ ವಿಜಯೇಂದ್ರ ಅವರ ಅಸಮರ್ಥತೆಯೇ ಕಾರಣ ಎಂದಿದ್ದಾರೆ
ನಾನು ಯಾವುದೇ ಬಣ ರಾಜಕಾರಣ ಮಾಡಿಲ್ಲ. ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಪಕ್ಷದ ಚೌಕಟ್ಟಿನೊಳಗೆಯೇ ವಕ್ಸ್ ಆಸ್ತಿ ವಿರುದ್ಧದ ಹೋರಾಟ ನಡೆಸಿದ್ದೇನೆ. ತಂಡವಾಗಿ ನಡೆಸಿದ ಆ ಹೋರಾಟ ಯಶಸ್ಸು ಕಂಡಿದೆ. ವಕ್ಫ್ ಕುರಿತ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ ಎಂದು ವಿವರಿಸಿರುವುದಾಗಿ ಗೊತ್ತಾಗಿದೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಕೂಡ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ದೃಷ್ಟಿಯಿಂದ ಪಕ್ಷ ಸಂಘಟನೆ ಆಗಬೇಕಾಗಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯೊಳಗೆ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತಕ್ಕೆ ಅಂತ್ಯ ಹಾಡಬೇಕು. ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಬಲಗೊಳ್ಳಬೇಕೆಂದರೆ, ಈಗಲೇ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು. ಎಲ್ಲರನ್ನು ವಿಶ್ವಾಸದಿಂದ ನಿಭಾಯಿಸಬಲ್ಲವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ.
ನಾಳೆ ಸಭೆ:
ಈ ನಡುವೆ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಅಭಿಪ್ರಾಯ ಆಲಿಸಲು ದೆಹಲಿಯಿಂದ ಕೇಂದ್ರ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಯತ್ನಾಳ್ ಬಣದ ನಾಯಕರು ನಾಳೆ ಸಭೆ ಸೇರುತ್ತಿದ್ದಾರೆ.
ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಯತ್ನಾಳ್ ಬಣದ ಎಲ್ಲಾ ನಾಯಕರು ಸಭೆ ಸೇರುತ್ತಿದ್ದು ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ತಮ್ಮ ಬಣದ ಅಭ್ಯರ್ಥಿ ಕಣಕ್ಕಿಳಿಸುವ ಕುರಿತಂತೆ ತೀರ್ಮಾನ ಕೈಗೊಳ್ಳಲಿದ್ದಾರೆ
Previous Articleಕಳ್ಳಬೇಟೆಗಾರರ ಬೇಟೆಗೆ Dog squad
Next Article ಬೇಸಿಗೆಗೆ ಇಂಧನ ಮಂತ್ರಿ ಜಾರ್ಜ್ ಪ್ಲಾನ್ ಗೊತ್ತಾ