ಬೆಂಗಳೂರು: ಹೈಕಮಾಂಡ್ ಎಚ್ಚರಿಕೆಯ ನಡುವೆಯೂ ರಾಜ್ಯದಲ್ಲಿ ಬಿಜೆಪಿ ಬಂಡಾಯ ಬಣ ರಾಜಕೀಯ ಮುಂದುವರೆದಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡ ವಕ್ಫ್ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಜನವರಿ 4 ರಂದು ವಕ್ಫ್ ವಿರುದ್ಧ ಎರಡನೇ ಹಂತದ ಹೋರಾಟ ನಡೆಸಲು ಶಾಸಕ ಯತ್ನಾಳ್ ಮತ್ತವರ ತಂಡ ಸಿದ್ಧತೆ ಕೈಗೊಂಡಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು, ಮೂರು ದಿನಗಳ ಹಿಂದೆ ಬಳ್ಳಾರಿ ಮತ್ತು ಹೊಸಪೇಟೆಗೆ ಭೇಟಿ ನೀಡಿ ವಕ್ಫ್ ವಿರುದ್ಧ ಎರಡನೇ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ವಕ್ಫ್ ಬೋರ್ಡ್ ವಿಚಾರದಲ್ಲಿ ಎರಡನೇ ಹಂತದ ಹೋರಾಟ ನಡೆಸಲಾಗುವುದು. ನಮ್ಮದು ಪಕ್ಷಾತೀತ ಹೋರಾಟ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ಆನಂದ್ ಸಿಂಗ್, ಕಾಂಗ್ರೆಸ್ ನಾಯಕರೂ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ನೀಡಬಹುದು ಎಂದು ಆಹ್ವಾನಿಸಿದ್ದಾರೆ.
ಇದರ ಮಧ್ಯೆ ಬಿ. ವೈ. ವಿಜಯೇಂದ್ರ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೊದಲ ಹಂತದ ವಕ್ಫ್ ವಿರುದ್ಧದ ಹೋರಾಟ ಬೆಳಗಾವಿಯಲ್ಲಿ ಅಂತ್ಯಗೊಂಡಿತ್ತು. ಪ್ರವಾಸದಾದ್ಯಂತ ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿಕಾರುತ್ತಲೇ ಬಂದಿದ್ದರು. ಇದು ಸಹಜವಾಗಿ ಬಿಜೆಪಿ ರಾಜ್ಯ ನಾಯಕರಿಗೆ ಮುಜುಗರ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ವರಿಷ್ಠರಿಗೆ ಬಿ. ವೈ. ವಿಜಯೇಂದ್ರ ದೂರು ನೀಡಿದ್ದರು. ಬಳಿಕ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ನೋಟಿಸ್ ಕೂಡಾ ನೀಡಿತ್ತು. ಈ ನಡುವೆ ಯತ್ನಾಳ್ ಅವರು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ವಿಜಯೇಂದ್ರ ವಿರುದ್ಧದ ಅಬ್ಬರ ಕಡಿಮೆಯಾಗಿತ್ತು. ಒಂದು ಕಡೆ ಸಿ.ಟಿ. ರವಿ ಪ್ರಕರಣದ ಕಾವು ತೀವ್ರಗೊಳ್ಳುತ್ತಿದೆ. ಯತ್ನಾಳ್ ಆದಿಯಾಗಿ ಬಿಜೆಪಿ ಎರಡು ಬಣದ ನಾಯಕರು ಸಿ. ಟಿ ರವಿ ಅವರಿಗೆ ಬೆಂಬಲ ಸೂಚಿಸಿದ್ದರು. ಆದರೆ, ಇದೀಗ ಯತ್ನಾಳ್ ಅಂಡ್ ಟೀಂ ಮತ್ತೆ ಚುರುಕಾಗಿರುವುದು ರಾಜ್ಯ ಬಿಜೆಪಿಯ ಇತರ ನಾಯಕರಿಗೆ ತಲೆಬಿಸಿ ತಂದಿದೆ.
ಬಣ ರಾಜಕೀಯ ಗೊಂದಲ ಸೃಷ್ಟಿಯಾಗದಂತೆ ವರಿಷ್ಠರು ಎಚ್ಚರಿಕೆ ನಡೆಯನ್ನು ಅನುಸರಿಸುತ್ತಿದ್ದಾರೆ. ಇತ್ತ ವಿಜಯೇಂದ್ರ ಬಣದ ಚಟುವಟಿಕೆಗಳೂ ಸೈಲೆಂಟ್ ಆಗಿವೆ. ಇಂತಹ ಸಂದರ್ಭದಲ್ಲಿ ಯತ್ನಾಳ್ ಟೀಂ ಪ್ರತ್ಯೇಕ ವಕ್ಫ್ ಪ್ರವಾಸ ನಡೆಸಿದರೆ ಅದು ಪಕ್ಷದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಯತ್ನಾಳ್ ಬಣದಲ್ಲಿದ್ದರೂ, ಎರಡನೇ ಹೋರಾಟಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
ರಾಜ್ಯಾದ್ಯಂತ ವಕ್ಫ್ನಿಂದ ತೊಂದರೆಗೆ ಒಳಗಾದವರ ದಾಖಲಾತಿಗಳು ಹಾಗೂ ಮಾಹಿತಿಗಳನ್ನು ಪಡೆದು ಜನವರಿ 6 ಮತ್ತು 7 ರಂದು ದೆಹಲಿಯಲ್ಲಿ ವಕ್ಫ್ ಜಂಟಿ ಸದನ ಸಮಿತಿಗೆ ವರದಿ ಸಲ್ಲಿಸಲು ಯತ್ನಾಳ್ ಬಣ ತೀರ್ಮಾನಿಸಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ಮಾತ್ರ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿದ್ದಾರೆ. ಬಣ ರಾಜಕೀಯಕ್ಕೆ ಅಂತ್ಯ ಆಡಲು ದೆಹಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
Previous Articleಸಿದ್ದರಾಮಯ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಯಾಕೆ ಗೊತ್ತಾ..
Next Article ಆರು ಗಂಟೆಯಲ್ಲಿ 300 ಕೋಟಿ ರೂಪಾಯಿ ಮದ್ಯ ಸೇವನೆ