ನವದೆಹಲಿ – ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ರಾಗಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಗಾಂಧಿ ಕುಟುಂಬದ ಪರಮಾಪ್ತ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಚುನಾವಣೆಯಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಗಾಂಧಿ ಕುಟುಂಬದ ಶ್ರೀ ರಕ್ಷೆ ಖರ್ಗೆ ಅವರ ಮೇಲಿದ್ದು ಅವರ ಆಯ್ಕೆ ಅತ್ಯಂತ ಸುಲಭ ಎನ್ನಲಾಗುತ್ತಿದೆ.
ಈ ಮೊದಲು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇರಳದ ಶಶಿ ತರೂರ್ ಹಾಗೂ ಮಧ್ಯಪ್ರದೇಶದ ದಿಗ್ವಿಜಯಸಿಂಗ್ ಮಧ್ಯೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ ಎನ್ನಲಾಗುತ್ತಿತ್ತು. ಆದರೆ, ಖರ್ಗೆಯವರ ಪ್ರವೇಶ ಖಚಿತಪಡುತ್ತಿದ್ದಂತೆಯೇ ದಿಗ್ವಿಜಯಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಖರ್ಗೆ ಮತ್ತು ತರೂರ್ ಮಾತ್ರ ಕಣದಲ್ಲಿ ಉಳಿದಿದ್ದು, ತರೂರ್ ಕೂಡಾ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.
ಕಳೆದ ಐವತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಕಳೆದ ಒಂದೂವರೆ ದಶಕದಲ್ಲಿ ಗಾಂಧಿ ಕುಟುಂಬದೊಂದಿಗೆ ಅತ್ಯಂತ ಪರಮಾಪ್ತರಾಗಿ ಗುರುತಿಸಿಕೊಂಡಿದ್ದಾರೆ.
ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪದೇಪದೇ ಗುಲ್ಲೆದ್ದರೂ, ಅವರು ಮಾತ್ರ ಪಕ್ಷದ ಹೈಕಮಾಂಡ್ ಮಾತ್ರ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತದೆ ಎನ್ನುವ ಮೂಲಕ ಹೈಕಮಾಂಡ್ ಕುರಿತಾಗಿ ತಮಗಿರುವ ನಿಷ್ಠೆಯನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ.
ಈ ಘಟನಾವಳಿಗಳ ಮಧ್ಯೆಯೇ ಅವರು ಯುಪಿಎ ನೇತೃತ್ವದ ಕೇಂದ್ರ ಸರಕಾರದಲ್ಲಿ ಎರಡು ಅವಧಿಗೆ ಮಹತ್ವದ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿಯೂ ಖರ್ಗೆ ಎಲ್ಲಿಯೂ ಪಕ್ಷ ಮತ್ತು ಪಕ್ಷದ ಹೈಕಮಾಂಡ್ ಮುಜುಗರಕ್ಕೆ ಒಳಗಾಗುವ ರೀತಿಯಲ್ಲಿ ಯಾವುದೇ ಹೇಳಿಕೆ ನೀಡದೆ, ಯಾವತ್ತೂ ಸಮಚಿತ್ತತೆ ಕಾಯ್ದುಕೊಂಡು ಬಂದಿದ್ದಾರೆ. ಹಾಗಾಗಿ, ಈಗ ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಸುಯೋಗ ಅವರಿಗೆ ಒಲಿದುಬಂದಿದೆ.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾಗ ಖರ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಅಧಿಕಾರದ ಹೆಬ್ಬಾಗಿಲಲ್ಲಿ ತಂದು ನಿಲ್ಲಿಸಿ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ ಹೈಕಮಾಂಡ್ ಎಸ್ .ಎಂ. ಕೃಷ್ಣ ಅವರನ್ನು ಈ ಹುದ್ದೆಯಲ್ಲಿ ಪ್ರತಿಷ್ಟಾಪಿಸಿದಾಗ ಮರು ಮಾತಾಡದೆ ಹೈಕಮಾಂಡ್ ನಿರ್ಧಾರ ಗೌರವಿಸಿದ್ದರು.
ನಂತರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ಮತ್ತೆ ಪ್ರತಿಪಕ್ಷ ನಾಯಕರಾಗಿ ಮುಖ್ಯಮಂತ್ರಿ ಹುದ್ದೆಯ ಸನಿಹಕ್ಕೆ ಬಂದಾಗ ಸಿದ್ದರಾಮಯ್ಯ ಅವರಿಗಾಗಿ ಹೈಕಮಾಂಡ್ ಸೂಚನೆಯಂತೆ ಹುದ್ದೆ ತೆರವು ಮಾಡಿ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿ ಕೇಂದ್ರ ಮಂತ್ರಿಯೂ ಅಗಿ ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಹೈಕಮಾಂಡ್ ಅಂಗಳದಲ್ಲಿ ತಮ್ಮದೆ ಛಾಪು ಮೂಡಿಸಿದ ಖರ್ಗೆ ಇದೀಗ ಸ್ವಾಭಾವಿಕ ಆಯ್ಕೆಯಾಗಿ ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ.ಈ ಹುದ್ದೆ ಅಲಂಕರಿಸುತ್ತಿರುವ ರಾಯ ಎರಡನೆಯ ವ್ಯಕ್ತಿ ಅಷ್ಟೇ ಅಲ್ಲ ದಲಿತ ಸಮುದಾಯಕ್ಕೆ ಸೇರಿದ ಎರಡನೇ ವ್ಯಕ್ತಿ ಇವರಾಗಿದ್ದಾರೆ.
ಖರ್ಗೆ ಬಿಟ್ಟರೆ ಕಾಂಗ್ರೆಸ್ ಗೆ ಪರ್ಯಾಯವಿಲ್ಲ
Previous Articleಕ್ರಿಪ್ಟೋಕರೆನ್ಸಿ ಹೆಸರಲ್ಲಿ ವಂಚನೆ
Next Article ವಿದ್ಯುತ್ ದರ ಹೆಚ್ಚಳ ವಾಪಸ್..?