ಬೆಂಗಳೂರು,ಆ.22 – ಇತ್ತೀಚೆಗೆ ರಾಜ್ಯದಲ್ಲಿ ಒಂದೇ ದಿನ 38 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದು ಆಂದಿನ ದಿನವನ್ನು ಕರಾಳ ಶನಿವಾರ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ 14 ಅಪಫಾತಗಳಲ್ಲಿ ನಾಲ್ವರು ಸಾವನ್ನಪ್ಪಿ 14 ಮಂದಿ ಗಾಯಗೊಂಡಿದ್ದಾರೆ.
ಹೆಬ್ಬಾಳದಲ್ಲಿ ಸ್ವಯಂ ಅಪಘಾತದಿಂದಾಗಿ ಪಶ್ಚಿಮ ಬಂಗಾಳ ಮೂಲದ 32 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಅತಿ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪತ್ತೆಯಾಗಿದೆ.
ರಾಜಾಜಿನಗರದಲ್ಲಿ ಎರಡು ಪ್ರತೊ ಅಪಘಾತಗಳು ಸಂಭವಿಸಿದ್ದು, ಸ್ವಯಂ ಅಪಘಾತದಿಂದಾಗಿ ರಾಹುಲ್(19) ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಅತಿ ವೇಗದಿಂದ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಹೆಣ್ಣೂರಿನ ಎರಡು ಅಪಘಾತಗಳು ನಡೆದಿದ್ದು, ರಸ್ತೆ ದಾಟುತ್ತಿದ್ದ ಪಾದಚಾರಿ ಪೂನಂದಾಸ್ (32) ಆರ್.ಎಕ್ಸ್ ಬೈಕ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಪೂನಂದಾಸ್ ರಸ್ತೆ ಬದಿ ಹೋಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಬಸವನಗುಡಿಯಲ್ಲಿ ಎರಡು ಅಪಘಾತಗಳು ಸಂಭವಿಸಿದ್ದು ಇಬ್ಬರು ಗಾಯಗೊಂಡಿದ್ದು ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಕೆ.ಆರ್ ಪುರಂದಲ್ಲಿ ಒಂದು ಅಪಘಾತ ನಡೆದು ಬೈಕ್ ಸವಾರರು ಗಾಯಗೊಂಡಿದ್ದಾರೆ. ವೈಟ್ ಫೀಲ್ಡ್ ಬಳಿ ಎರಡು ಅಪಘಾತಗಳು ಸಂಭವಿಸಿರುವ ವರದಿ ಬಂದಿದ್ದು ಅಲ್ಲಿಕೂಡ ಯಾವುದೇ ಸಾವು ಸಂಭವಿಸಿಲ್ಲ. ಹುಳಿಮಾವುವಿನಲ್ಲಿ ಎರಡು ಅಪಘಾತಗಳು ಸಂಭವಿಸಿದ್ದರೆ, ಸದಾಶಿವನಗರ ರಸ್ತೆ ಅಪಘಾತವಾಗಿರುವ ವರದಿ ಬಂದಿದೆ.