ಅದಾನಿ ಎಂಟರ್ಪ್ರೈಸಸ್ (Adani Enterprises) ಒಡೆಯರಾಗಿರುವ ಭಾರತದ ಗೌತಮ್ ಅದಾನಿ (Gautam Adani), ಬುಧವಾರದ ಸ್ಟಾಕ್ ಮಾರ್ಕೆಟ್ ನಲ್ಲಿ ಮತ್ತೆ ನಷ್ಟವನ್ನು ಅನುಭವಿಸಿದ ಪರಿಣಾಮ, ಜಗತ್ತಿನ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಅಲ್ಲದೆ, ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ಎನ್ನುವ ಬಿರುದನ್ನೂ ಸಹ ಕಳೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ Hindenburg Research ಸಂಸ್ಥೆಯು ವರದಿಯೊಂದನ್ನು ಪ್ರಕಟಿಸಿ, ಅದಾನಿ ಸಂಸ್ಥೆಯ ಮೇಲೆ ವಂಚನೆಯ ಆರೋಪವನ್ನು ಹೊರಿಸಿತ್ತು. ಅದರ ಬೆನ್ನಲ್ಲೇ, ಸ್ಟಾಕ್ ಮಾರ್ಕೆಟ್ ನಲ್ಲಿ ಅದಾನಿ ಸಂಸ್ಥೆಯ ವಹಿವಾಟು ಕುಸಿಯ ತೊಡಗಿತು.
ಫೆಬ್ರವರಿ 1, 2023 ರ ಸ್ಟಾಕ್ ಮಾರ್ಕೆಟ್ ನಲ್ಲಿ ಅದಾನಿಯವರು ಒಂದೇ ದಿನಕ್ಕೆ ಸುಮಾರು 13. 1 ಬಿಲಿಯನ್ ಡಾಲರ್ ಗಳಷ್ಟು ನಷ್ಟ ಅನುಭವಿಸಿದರು. Adani Power 5% ಮತ್ತು Adani Total Gas 10% ನಷ್ಟು ನಷ್ಟವನ್ನು ಅನುಭವಿಸಿದವು. Hindenburg Research ವರದಿಯಿಂದ ಅತಿ ದೊಡ್ಡ ಹೊಡೆತ ಪಡೆದ Adani Total Gas ಸುಮಾರು 27 ಬಿಲಿಯನ್ ಡಾಲರ್ ಗಳ ನಷ್ಟವನ್ನು ಕಂಡಿದೆ. ಅದಾನಿಯವರ ಒಟ್ಟು ಸಂಪತ್ತು 75 ಬಿಲಿಯನ್ ಡಾಲರ್ ಗಳಿಗೆ ಇಳಿದಿದೆ. ಈ ನಷ್ಟದಿಂದಾಗಿ FORBES ಸೂಚ್ಯಾಂಕದಲ್ಲಿ ಅದಾನಿಯವರು 3 ನೇ ಸ್ಥಾನದಿಂದ 15 ನೇ ಸ್ಥಾನಕ್ಕೆ ಇಳಿದರೆ, ಅವರ ಪ್ರತಿಸ್ಪರ್ಧಿ ಅಂಬಾನಿಯವರು 83.1 ಬಿಲಿಯನ್ ಡಾಲರ್ ಗಳೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ.
Hindenburg ಸಂಸ್ಥೆಯ ಆರೋಪಗಳಿಗೆ ಅದಾನಿ ಸಂಸ್ಥೆಯು ಪ್ರತ್ಯುತ್ತರ ನೀಡಿದ್ದರೂ, ಅದು ಸಮರ್ಪಕವಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ‘ಅವರ ಭಾವನೆಗಳಿಗೆ ಧಕ್ಕೆಯಾಗಿರುವ ಕಾರಣ, ಹೂಡಿಕೆದಾರರು ಅದಾನಿ ಸಂಸ್ಥೆಯ ಷೇರುಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಮತ್ತೆ ಸ್ಥಿರವಾಗಲು ಸ್ವಲ್ಪ ಸಮಯ ಬೇಕಾಗುವುದು’ ಎಂದು ಸ್ಟಾಕ್ ಮಾರ್ಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.