ಶಿವಮೊಗ್ಗ,ಏ.12-ಮಠಗಳಲ್ಲಿ ಕೋಟ್ಯಂತರ ಹಣವಿರಲಿದೆಯೆಂದು ತಿಳಿದು ಮಠಕ್ಕೆ ಕನ್ನ ಹಾಕಲು ಹೋದ ಖದೀಮರು 50 ಸಾವಿರ ರೂ. ಹಣ ದರೋಡೆ ಮಾಡಿದ 12 ಮಂದಿ ಜಿಲ್ಲಾ ಪೊಲೀಸರ ಅತಿಥಿಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕು ಮಹಿಷಿ ಗ್ರಾಮದ ಪುರಾತನ ಉತ್ತರಾದಿ ಮಠದಲ್ಲಿ 300 ಕೋಟಿ ರೂ. ಇದೆ ಎಂಬ ವದಂತಿ ಮೇರೆಗೆ 15ಕ್ಕೂ ಹೆಚ್ಚಿರುವ ದರೋಡೆಕೋರರ ತಂಡ,ಕಳೆದ ಏ.5ರ ರಾತ್ರಿ ಮಠಕ್ಕೆ ನುಗ್ಗಿ ಅಲ್ಲಿದ್ದವರನ್ನು ಬೆದರಿಸಿ ಮಠದಲ್ಲಿದ್ದ 50 ಸಾವಿರ ರೂ.ಗಳನ್ನು ದರೋಡೆ ಮಾಡಿದ್ದರು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನನ್ವಯ ಪೊಲೀಸರು ಮಠಕ್ಕೆ ಭೇಟಿ ನೀಡಿದಾಗ 50 ಸಾವಿರ ರೂ. ದರೋಡೆ ಆಗಿರುವುದು ತಿಳಿದುಬಂದಿತ್ತು. ಮಠದಲ್ಲಿನ ಬಂಗಾರ ಸೇರಿ ಬೇರೆ ಯಾವುದೇ ವಸ್ತು ಕಳುವಾಗಿರಲಿಲ್ಲ. ಪರಿಶೀಲಿಸಿದಾಗ ಖದೀಮರ ತಂಡವೊಂದು ಬಂದು ದರೋಡೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿತ್ತು.
ದರೋಡೆಗೂ ಮುನ್ನ ತಂಡ ಮಠವನ್ನೊಮ್ಮೆ ಬಂದು ಪರಿಶೀಲನೆ ನಡೆಸಿಕೊಂಡು ಹೋಗಿದ್ದು ಸಹ ತನಿಖೆಯಿಂದ ಗೊತ್ತಾಗಿತ್ತು. ಪೂರ್ವಸಂಚಿನಂತೆ ಏ.5ರ ರಾತ್ರಿ ಟಿಟಿ ವಾಹನ ಮಾಡಿಕೊಂಡು ಬಂದು ದರೋಡೆಗೆ ಯತ್ನಿಸಿದ್ದರು. ಆದರೆ, 300 ಕೋಟಿ ಸಿಗದೇ ಬ್ಯಾಂಕ್ನಿಂದ ತಂದಿಟ್ಟಿದ್ದ 50 ಸಾವಿರ ರೂ. ದೋಚಿ ತಂಡ ಪರಾರಿಯಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಟಿಟಿ ವಾಹನ, 1 ಮಹೀಂದ್ರಾ ಬೊಲೆರೋ, 2 ವಾಹನ ಹಾಗೂ ಆಯುಧಗಳು ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.