ಬೆಚ್ಚಿ ಬೀಳಿಸಿದ ಚಿರತೆ.ಬೆಂಗಳೂರು.
ಮಹಾನಗರ ಬೆಂಗಳೂರಿನ ನೈಸ್ ರಸ್ತೆಯ ಕೆಲವು ಪ್ರದೇಶಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ದಾರಿ ಹೋಕರಲ್ಲಿ ಆತಂಕ ಮೂಡಿಸುವ ಚಿರತೆ ಇದೀಗ ನಗರದೊಳಗೂ ಕೂಡ ಪ್ರವೇಶ ಪಡೆದುಕೊಂಡಿದೆ.
ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ಕ್ಯಾಲಸನಹಳ್ಳಿ ಸಮೀಪದ ಉಪ್ಕಾರ್ ಅರ್ಬರ್ಸ್ ಬಡಾವಣೆಯಲ್ಲಿ ಭಾನುವಾರ ಬೆಳಗಿನ ಜಾವ 3ಗಂಟೆಯ ಸುಮಾರಿನಲ್ಲಿ ಚಿರತೆ ಓಡಾಡಿರುವ ದೃಶ್ಯಗಳು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾತ್ರಿ ವೇಳೆ ಆಹಾರ ಅರಸಿ ಚಿರತೆ ಇಲ್ಲಿಗೆ ಬಂದಿದೆ ಎಂಬ ಮಾಹಿತಿ ಪಡೆದಿರುವ ಬಡಾವಣೆಯ ನಿವಾಸಿಗಳು ಇದರಿಂದ ಆತಂಕಗೊಂಡಿದ್ದಾರೆ.
ಕ್ಯಾಲಸನಹಳ್ಳಿ ರಸ್ತೆಯ ಮೂಲಕವೇ ಜಿಗಣಿ, ಬೊಮ್ಮಸಂದ್ರ ಕೈಗಾರಿಕ ಪ್ರದೇಶಕ್ಕೆ ನೂರಾರು ಮಂದಿ ಕಾರ್ಮಿಕರು ವಿವಿಧ ಪಾಳಿಗಳಲ್ಲಿ ರಾತ್ರಿಯಿಡೀ ಓಡಾಟ ಮಾಡುತ್ತಾರೆ. ಚಿರತೆ ಕಂಡಿರುವುದರಿಂದ ಬಡಾವಣೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಭಯಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕ್ರಮ ಕೈಗೊಂಡು ಚಿರತೆಯನ್ನು ಪತ್ತೆ ಮಾಡಿ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.