ಬೆಂಗಳೂರು.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಮರಸಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೇ ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಕ್ರಮ ಎಸಗಿರುವ ಆರೋಪ ಕೇಳಿಬಂದಿದೆ.
ವಿಜಯೇಂದ್ರ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಜೊತೆ ಕೈಜೋಡಿಸಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ದಾಖಲೆ ಬಿಡುಗಡೆ ಮಾಡಿದ್ದಾರೆ.
ಮೈಸೂರಿನ ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿದಂತೆ 11 ಮಂದಿ ಹೆಸರಲ್ಲಿ ಜಂಟಿ ಜಾಗ ಇತ್ತು.. ಈ ಜಾಗವನ್ನು ಮುಡಾ ವಶಪಡಿಸಿಕೊಂಡಿದೆ. ಇದಕ್ಕೆ ಪರಿಹಾರ ಬಿಡುಗಡೆ ಮಾಡಲಾಗಿತ್ತು ಆದರೆ ಅದನ್ನು ನಿರಾಕರಿಸಿದ ನಿವೇಶನದ ಮಾಲೀಕರು ಪರಿಹಾರ ಹಣಕ್ಕೆ ಬದಲಾಗಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
50 ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ.. ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್, ಇಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿಕೊಂಡು ಅಕ್ರಮವೆಸಗಿದ್ದಾರೆ. ಇದಕ್ಕೆ ವಿಜಯೇಂದ್ರ ಅವರ ಬೆಂಬಲ ಇದೆ ಎಂದು ದೂರಿದರು
ಈ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು.. 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ ಮಾಡಲಾಗಿದೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪ್ತ ವಲಯದಲ್ಲಿ ಮಹಾದೇವಸ್ವಾಮಿ ಗುರುತಿಸಿಕೊಂಡಿದ್ದು, ಎಲ್.ಆರ್.ಮಹದೇವಸ್ವಾಮಿ ಅವರ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಇದರ ಜೊತೆಗೆ ಹೆಚ್ಚುವರಿಯಾಗಿ ಮೈಸೂರಿನ ಸರಸ್ವತಿಪುರಂನಲ್ಲಿ 50×80 ಹೆಚ್ಚುವರಿ ಸೈಟ್ ಅನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ.ಬಳಿಕ ಇದೇ ನಿವೇಶನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪತ್ನಿ ಸೌಮ್ಯ ಎಂ ಸ್ವಾಮಿ ಹೆಸರಲ್ಲಿ ಖರೀದಿಸಿದ್ದಾರೆ. ಮಾರುಕಟ್ಟೆ ಮೌಲ್ಯದ ಪ್ರಕಾರ, ಸೈಟ್ 7 ಕೋಟಿ ರೂ.ಗಿಂತ ಹೆಚ್ಚು ಮೌಲ್ಯವುಳ್ಳದ್ದಾಗಿದೆ, ಆದರೆ ಸೌಮ್ಯ ಅದನ್ನು 5.36 ಲಕ್ಷಕ್ಕೆ ಖರೀದಿಸಿದ್ದಾರೆ ಎಂದು ಆರೋಪಿಸಿದರು.