ರಕ್ಷಿತ್ ಶೆಟ್ಟಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಸಾಕಷ್ಟು ಪ್ರೀ-ರಿಲೀಸ್ ಹೈಪ್ ಸೃಷ್ಟಿಸಿದೆ. ಈಗಾಗಲೇ ಕರ್ನಾಟಕ ಮತ್ತು ಭಾರತದಾದ್ಯಂತ 100 ಕ್ಕೂ ಹೆಚ್ಚು ಪ್ರೀಮಿಯರ್ ಶೋ ನಡೆಸಿದೆ. ವಿಶ್ವಾದ್ಯಂತ ಸರಿಸುಮಾರು 1,800 ಥಿಯೇಟರ್‌ಗಳಲ್ಲಿ ಚಿತ್ರವು ಈ ವಾರ (ಜೂ.10) ಬಿಡುಗಡೆಯಾಗಲಿದೆ.
ಕೆಆರ್‌ಜಿ ಸ್ಟುಡಿಯೋಸ್ ಅಡಿಯಲ್ಲಿ ಕರ್ನಾಟಕದಲ್ಲಿ ಚಿತ್ರವನ್ನು ವಿತರಿಸುತ್ತಿರುವ ಕಾರ್ತಿಕ್ ಗೌಡ, ರಾಜ್ಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ಸುಮಾರು 500 ವಿದೇಶಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೂನ್ 10 ರಂದು ಚಿತ್ರ ಬಿಡುಗಡೆಯಾಗುವ ಮೊದಲು ನಾವು ಕರ್ನಾಟಕದಲ್ಲಿಯೇ 100 ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಯುಎಸ್ಎ ನಲ್ಲಿ 200 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಮತ್ತು ಗಲ್ಫ್‌ನಲ್ಲಿ 100 ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ನೇಪಾಳದಲ್ಲಿ ಪ್ರೀಮಿಯರ್ ಶೋ ನಡೆಸಲು ಉದ್ದೇಶಿಸಲಾಗಿದೆ, ಇದರಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ವಿತರಕರೊಂದಿಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಮತ್ತು ಸ್ಕ್ರೀನಿಂಗ್ ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದಿದ್ದಾರೆ.
ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಮತ್ತು ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ವಿತರಣೆ ಹಕ್ಕು ಪಡೆದಿದ್ದಾರೆ. ತೆಲುಗು ಆವೃತ್ತಿಯನ್ನು ರಾಣಾ ದಗ್ಗುಪಾಟಿ ವಿತರಿಸಲಿದ್ದು, ಚಿತ್ರವನ್ನು 100-150 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆ ನಿರ್ಧರಿಸಿದೆ. ಬೇಡಿಕೆಗೆ ಅನುಗುಣವಾಗಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸುವುದಾಗಿ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
777 ಚಾರ್ಲಿ ಸಿನಿಮಾಗೆ ಕಿರಣ್‌ರಾಜ್ ಕಥೆ ಬರೆದು ನಿರ್ದೇಶಿಸಿದ್ದಾರೆ ಹಾಗು ರಕ್ಷಿತ್ ಶೆಟ್ಟಿ ನಟಿಸಿದ್ದಾರೆ, ರಾಜ್ ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಮತ್ತಿತರರು ಅಭಿನಯಿಸಿದ್ದಾರೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ನೋಬಿನ್ ಪಾಲ್ ನೀಡಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರ:
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಿರಣ್ ರಾಜ್ ನಾನು ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ, ಸಿನೆಮಾ ಪ್ರಯಾಣ ಸುಲಭವಾಗಿರಲಿಲ್ಲ ಆದರೆ ಈಗ ಪ್ರೇಕ್ಷಕರ ಕಣ್ಣುಗಳಲ್ಲಿ 777 ಚಾರ್ಲಿ ಪ್ರಯಾಣದ ಪ್ರತಿಬಿಂಬ ಕಾಣುತ್ತಿದೆ, ಇದು ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಹಾಗು ಹಿಂದಿಯಲ್ಲಿ ಜೂನ್ 10 ರಂದು ರಿಲೀಸ್ ಆಗಲಿದೆ. ಮಾನವನ ಭಾವನೆಗಳ ಮೇಲಿನ ಮೋಹದ ಬಗ್ಗೆ ಮಾತನಾಡಿದ ಕಿರಣರಾಜ್, ತನ್ನ ಜೀವನದಲ್ಲಿ ತಾನು ಈ ಹಂತಕ್ಕೆ ಬಂದ ಹಾದಿಯ ಬಗ್ಗೆ ತಿಳಿಸಿದ್ದಾರೆ.
ನಾನು 8 ವರ್ಷ ವಯಸ್ಸಿನವನಾಗಿದ್ದಾಗ ಪೇಪರ್ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಕುಟುಂಬದ ಸಮಸ್ಯೆಗಳು ಕಾಲೇಜಿಗೆ ಹೋಗುವ ನನ್ನ ಕನಸಿಗೆ ಕಡಿವಾಣ ಹಾಕಿತ್ತು. ಆ ನೋವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಸೆಕ್ಯುರಿಟಿ ಗಾರ್ಡ್:
ನಾನು ಬಾರ್‌ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದೇನೆ ಮತ್ತು ಸೆಕ್ಯುರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದ್ದೇನೆ. ನಾನು ಬಹಳಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ನಾನು ನಿದ್ದೆ ಮಾಡುವ ಮುನ್ನ ಅಳದ ದಿನವೇ ಇರಲಿಲ್ಲ. ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿ ಎಲ್ಲಾ ರೀತಿಯ ಭಾವನೆಗಳನ್ನು ಅನುಭವಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅದಕ್ಕಾಗಿಯೇ ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ದೃಶ್ಯಗಳನ್ನು ಬರೆಯಲು ನನಗೆ ಸಾಧ್ಯವಾಯಿತು, ಸೆಟ್ ನಲ್ಲಿ ನಾನು ತುಂಬಾ ಕಠಿಣವಾಗಿ ವರ್ತಿಸಿರಬಹುದು, ಆದರೆ ಹೃದಯದಲ್ಲಿ ತುಂಬಾ ಭಾವನಾತ್ಮಕ ವ್ಯಕ್ತಿ ಎಂದು ಕಿರಣ್ ಹೇಳಿಕೊಂಡಿದ್ದಾರೆ.
ಭಾವನೆಗಳನ್ನು ಮುನ್ನೆಲೆಗೆ ತಂದಾಗ ಒಬ್ಬ ವ್ಯಕ್ತಿಯು ಬಲಶಾಲಿಯಾಗುತ್ತಾನೆ ಎಂದು ನಾನು ನಂಬುತ್ತೇನೆ. ಪ್ರೇಕ್ಷಕರು 777 ಚಾರ್ಲಿಯನ್ನು ವೀಕ್ಷಿಸುತ್ತಿದ್ದಾಗ ನಾನು ಅದನ್ನು ನೋಡಿದೆ ಎಂದು ತಿಳಿಸಿದ್ದಾರೆ.