ಬೆಂಗಳೂರು: ಈ ಜನಪ್ರಿಯ ನಾಣ್ನುಡಿ ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಅನ್ವಯವಾಗುತ್ತಾ..!
ಹೌದೆನ್ನುತ್ತವೆ ಘಟನಾವಳಿಗಳು. ರಾಜ್ಯ ಕಾಂಗ್ರೆಸ್ ನಾಯಕರ ಪೈಕಿ ಕೇಳಿಬರುತ್ತಿರುವ ಪ್ರಮುಖ ನಾಯಕರ ಹೆಸರಲ್ಲಿ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರದ್ದು ಅತ್ಯಂತ ಪ್ರಮುಖ ಹೆಸರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಲಿ ಇಲ್ಲದಿರಲಿ, ಶಿವಕುಮಾರ್ ಸದಾ ಸುದ್ದಿಯಲ್ಲಿರುತ್ತಾರೆ. ಸಂಘಟನಾ ಚತುರ ಎಂದು ಗುರುತಿಸಲ್ಪಡುವ ಇವರ ಸುತ್ತ ಒಂದಿಲ್ಲೊಂದು ವಿವಾದಗಳು ಆವರಿಸಿಕೊಂಡಿರುತ್ತದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ನೀಲಿಕಣ್ಣಿನ ಹುಡುಗನಾಗಿ ಗುರುತಿಸಿಕೊಂಡಿದ್ದರೂ ಬಂಗಾರಪ್ಪ ಅವರು ಕಾಂಗ್ರೆಸ್ ಬಿಟ್ಟಾಗ ಅವರ ಜೊತೆ ಹೋಗದ ಪಕ್ಷ ನಿಷ್ಟ ನಾಯಕ.
ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಎಸ್.ಎಂ.ಕೃಷ್ಣ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಗುರಿಯೊಂದಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಬೆಂಗಳೂರಿಗೆ ಬಂದಾಗ ಅವರಿಗೆ ಜೊತೆಯಾದ ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟಿಸಿದರು. ಎಸ್.ಎಂ.ಕೃಷ್ಣ ಪಾಂಚಜನ್ಯ ಮೊಳಗಿಸಿದಾಗ ದಂಡನಾಯಕನಾಗಿ ಪಕ್ಷ ಮುನ್ನಡೆಸಿದ್ದು ಶಿವಕುಮಾರ್.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿ ಶಿವಕುಮಾರ್‌ಗೆ ಉನ್ನತ ಹುದ್ದೆ ಸಿಗುತ್ತದೆಂಬ ನಿರೀಕ್ಷೆಯಿತ್ತು. ಆದರೆ ಅಂದು ಕಾಂಗ್ರೆಸ್‌ನಲ್ಲಿದ್ದ ಘಟಾನುಘಟಿ ನಾಯಕರಾದ ಕೆ.ಎಚ್.ರಂಗನಾಥ್, ಎಚ್.ಸಿ. ಶ್ರೀಕಂಠಯ್ಯ, ಧರ್ಮಸಿಂಗ್, ಖರ್ಗೆ, ಕಾಗೋಡು ತಿಮ್ಮಪ್ಪ, ಚಂದ್ರೇಗೌಡ ಅವರಿದ್ದ ಪರಿಣಾಮವಾಗಿ ಸಂಪುಟದಲ್ಲಿ ಎರಡನೇ ಸಾಲಿಗೆ ತಳ್ಳಲ್ಪಟ್ಟರು.
ಹೀಗಿದ್ದರೂ ಒಂದಿನಿತೂ ವಿಚಲಿತರಾಗದ ಶಿವಕುಮಾರ್ ಅಂದಿನ ಸರ್ಕಾರ ಎದುರಿಸಿದ ಡಾ.ರಾಜ್‌ಕುಮಾರ್ ಅಪಹರಣ, ಕಾವೇರಿ ವಿವಾದ, ಬರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಸರ್ಕಾರಕ್ಕೆ ಯಾವುದೇ ಗಂಡಾಂತರ ಎದುರಾಗದಂತೆ ನೋಡಿಕೊಂಡರು. ಈ ಅವಧಿಯಲ್ಲಿ ಪಕ್ಷದ ಹಲವರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು.
ಇದೇ ಅವಧಿಯಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಅಂದಿನ ವಿಲಾಸ್ ರಾವ್ ದೇಶಮುಖ್ ಸರ್ಕಾರ ಬಿಕ್ಕಟ್ಟು ಎದುರಿಸಿದಾಗ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
ತ್ಯಾಗ: ಇದಾದ ನಂತರ ನಡೆದ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಆದರೆ ಶಿವಕುಮಾರ್ ಮಾತ್ರ ಅಧಿಕಾರದಿಂದ ದೂರ ಉಳಿದರು. ಪಕ್ಷ ನಿಷ್ಠೆ ಇವರ ಕೈ ಹಿಡಿಯಲಿಲ್ಲ.
ನಂತರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲ ಕಾಲ ಸಂಘಟನೆಯ ಜವಾಬ್ದಾರಿ ಹೊತ್ತರೂ ಪಕ್ಷದ ಅಧ್ಯಕ್ಷರಾಗಲಿಲ್ಲ, ಬದಲಾಗಿ ಮತ್ತೊಬ್ಬ ನಾಯಕರಿಗಾಗಿ ತ್ಯಾಗ ಮಾಡಬೇಕಾಯಿತು.
ಈ ಎಲ್ಲಾ ವಿದ್ಯಮಾನಗಳ ಬಳಿಕ ಡಾ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರು. ಇವರ ನೇತೃತ್ವದಲ್ಲಿ ಹಲವು ಚುನಾವಣೆ ಎದುರಿಸಿದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆಗ ಮತ್ತೆ ಹೈಕಮಾಂಡ್ ಶಿವಕುಮಾರ್ ಅವರತ್ತ ನೋಡಿತು.
ಶಿವಕುಮಾರ್ ಅವರನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತರಬೇಕೆನ್ನುವ ಗುರಿ ನೀಡಿತು.
ಹೈಕಮಾಂಡ್ ತಮ್ಮ ಮೇಲಿಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ ಶಿವಕುಮಾರ್ ಹಲವು ಕಾರಣಗಳಿಗಾಗಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಎಲ್ಲಾ ನಾಯಕರನ್ನು ಒಟ್ಟುಗೂಡಿಸಿ ಪಕ್ಷ ಸಂಘಟಿಸಿದರು. ಪರಿಣಾಮವಾಗಿ ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.
ಮಂತ್ರಿಯೂ ಆಗಲಿಲ್ಲ: ಈ ಬಾರಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಎಲ್ಲರೂ ಲೆಕ್ಕಾಚಾರ ಮಾಡಿದ್ದರು. ಆದರೆ ನಡೆದದ್ದೇ ಬೇರೆ, ಅಲ್ಲಿಯವರೆಗೆ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಬಹುದು ಎಂದು ಎಲ್ಲರೂ ಲೆಕ್ಕ ಹಾಕಿದ್ದರು. ಆದರೆ ಆಗಿದ್ದೇ ಬೇರೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗುವುದಿರಲಿ ಕನಿಷ್ಠ ಮಂತ್ರಿಯೂ ಆಗಲಿಲ್ಲ.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುವ ಸಮಯದಲ್ಲಿ ಮುಂಚೂಣಿಗೆ ಬಾರದ ಕಳಂಕ, ಇವರಿಗೆ ಅಧಿಕಾರ ಕೊಡುವಾಗ ಮುನ್ನೆಲೆಗೆ ಬಂತು. ಲೋಕಾಯುಕ್ತದಲ್ಲಿ ಇವರ ವಿರುದ್ಧ ಪ್ರಕರಣವಿದೆ ಎಂಬ ನೆಪವೊಡ್ಡಿ ಮಂತ್ರಿ ಸ್ಥಾನ ನಿರಾಕರಿಸಲಾಯಿತು.
ಸುಮಾರು ವರ್ಷದವರೆಗೆ ಅಧಿಕಾರದಿಂದ ದೂರವಿದ್ದ ಶಿವಕುಮಾರ್ ಅವರ ನೆರವಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬರಬೇಕಾಯಿತು. ಸೋನಿಯಾ ಅವರ ಮಧ್ಯಪ್ರವೇಶದ ನಂತರ ಒಲ್ಲದ ಮನಸ್ಸಿನಿಂದಲೇ ಇವರನ್ನು ಮಂತ್ರಿ ಮಾಡಲಾಯಿತು.
ಇದಾದ ಬಳಿಕ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಸೋಲನುಭವಿಸಿತು. ಆದರೂ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಹೈಕಮಾಂಡ್‌ನ ನಿಲುವು ಮತ್ತೆ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಶಿವಕುಮಾರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿ ಸರ್ಕಾರಕ್ಕೆ ಯಾವ ಗಂಡಾಂತರ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಯಿತು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಈ ಕೆಲಸ ನಿರ್ವಹಿಸಿದ ಶಿವಕುಮಾರ್ ಎಷ್ಟರಮಟ್ಟಿಗೆ ಕೆಲಸ ಮಾಡಿದರು ಎಂದರೆ ಶಿವಕುಮಾರ್-ಕುಮಾರಸ್ವಾಮಿ ಅವರನ್ನು ಜೋಡೆತ್ತು ಎಂದು ಕರೆಯುವಷ್ಟರ ಮಟ್ಟಿಗೆ.
ಹೀಗಿದ್ದರೂ ಆ ಸರ್ಕಾರದಲ್ಲಿ ಇವರಿಗೆ ಸಿಕ್ಕಿದ್ದು ಒಂದೇ ಖಾತೆ.
ಇ.ಡಿ. ಉಡುಗೊರೆ: ಈ ನಡುವೆ ಗುಜರಾತ್‌ನಲ್ಲಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡುವ ಜವಾಬ್ದಾರಿ ಹಾಗೂ ಗುಜರಾತ್ ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ. ಇದನ್ನು ನಿಭಾಯಿಸಿದ ಇವರಿಗೆ ಸಿಕ್ಕಿದ್ದು ಇ.ಡಿ. ಪ್ರಕರಣದ ಉಡುಗೊರೆ.
ಈ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದಯನೀಯ ಸೋಲು ಕಂಡಿತು. ಕರ್ನಾಟಕದ ಇತಿಹಾಸದಲ್ಲಿ ಇಂತಹ ಸೋಲನ್ನು ಕಾಂಗ್ರೆಸ್ ಕಂಡಿರಲಿಲ್ಲ. ಈ ಸೋಲಿನ ಹೊಣೆ ಹೊತ್ತು ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು.
ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾದರು. ಆದರೆ, ಪಕ್ಷದ ಅಧ್ಯಕ್ಷರಾಗಲು ಯಾರೂ ಮುಂದೆ ಬರಲಿಲ್ಲ. ಬದಲಾಗಿ ಹಲವು ಮಂದಿ ನಮಗಿನ್ನು ಇಲ್ಲಿ ರಾಜಕೀಯ ಭವಿಷ್ಯವಿಲ್ಲವೆಂದು ಪಕ್ಷ ತೊರೆದರು. ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಷ್ಟ ಎಂದು ಸಮೀಕ್ಷೆಗಳು ಹೇಳಿದವು.
ಇಂತಹ ಸಮಯದಲ್ಲಿ ಪಕ್ಷದ ಅಧ್ಯಕ್ಷರಾಗಿ ಸಂಘಟನೆಯ ಜವಾಬ್ದಾರಿ ಹೊರುತ್ತೇನೆಂದು ಶಿವಕುಮಾರ್ ಮುಂದೆ ಬಂದರೂ ಮತ್ತೆ ಅವರ ವಿರುದ್ಧ ಪ್ರಕರಣಗಳಿವೆ, ಇವರದ್ದು ಹೊಂದಾಣಿಕೆ ರಾಜಕೀಯ ಎಂದೆಲ್ಲಾ ಆರೋಪಿಸಿ ಹೈಕಮಾಂಡ್ ದಾರಿ ತಪ್ಪಿಸುವ ಕೆಲಸ ಮಾಡಲಾಯಿತು.
ಅಂತಿಮವಾಗಿ ಸೋನಿಯಾ ಗಾಂಧಿ ಮಧ್ಯ ಪ್ರವೇಶಿಸಿ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸಿದರು.
ಅಧ್ಯಕ್ಷರಾಗಿ ನೇಮಕಗೊಂಡ ಶಿವಕುಮಾರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ತೊಡಗಿದರು. ಈ ಅವಧಿಯಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಲಾಯಿತು. ವಿಚಲಿತರಾಗದ ಶಿವಕುಮಾರ್ ಸಂಘಟನೆಯತ್ತ ಗಮನ ಹರಿಸಿದರು. ಆದರೂ ಚುನಾವಣಾ ರಾಜಕಾರಣದಲ್ಲಿ ಕಾಂಗ್ರೆಸ್ ಯಶಸ್ಸು ಗಳಿಸಲಿಲ್ಲ. ಸೋಲನ್ನು ತಮ್ಮ ಹೊಣೆಗಾರಿಕೆ ಎಂದು ಹೇಳಿದ ಶಿವಕುಮಾರ್ ಹಗಲಿರುಳೆನ್ನದೆ ಸಂಘಟನೆಯಲ್ಲಿ ತೊಡಗಿದರು.
ಅಧಿಕಾರಕ್ಕಾಗಿ ಸಂಚು: ಸತತ ಪರಿಶ್ರಮದ ಪರಿಣಾಮವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಇದೀಗ ಅಧಿಕಾರ ಹಿಡಿಯುವ ಭರವಸೆ ಮೂಡಿಸಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಪರವಾದ ವಾತಾವರಣವಿರುವುದನ್ನು ಹೇಳುತ್ತಿವೆ. ಈಗ ಅನೇಕರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದರೆ, ಹಲವರು ಅಧಿಕಾರಕ್ಕಾಗಿ ಸಂಚು ರೂಪಿಸುತ್ತಿದ್ದಾರೆ.
ಸಂಕಷ್ಟದ ದಿನಗಳಲ್ಲಿ ಎದೆಗುಂದದೆ ಪಕ್ಷವನ್ನು ಮುನ್ನಡೆಸಿ ಅಧಿಕಾರ ಹಿಡಿಯುವ ಹಂತಕ್ಕೆ ತಲುಪಿಸಿದ ನಾಯಕನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇಬೇಕು. ಆದರೆ, ಶಿವಕುಮಾರ್ ಅವರಿಗೆ ಆ ಅದೃಷ್ಟವಿಲ್ಲವೇನೂ ಎನ್ನುವ ಚಿತ್ರಣ ನೀಡುತ್ತಿವೆ ಪ್ರಸಕ್ತ ವಿದ್ಯಮಾನಗಳು.
ಹೀಗಾಗಿ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬ ನಾಣ್ನುಡಿ ಶಿವಕುಮಾರ್ ಅವರಿಗೆ ಅನ್ವಯವಾಗುತ್ತದೆ ಎನ್ನಬಹುದು. ಆದರೆ, ರಾಜಕೀಯದಲ್ಲಿ ಯಾವುದೇ ಲೆಕ್ಕಾಚಾರ ಹೀಗೇ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಲೇಖನ; ಆರ್.ಎಚ್. ನಟರಾಜ್, ಹಿರಿಯ ಪತ್ರಕರ್ತ