ಕೊರೊನಾ ಕಾಟ ಕಡಿಮೆಯಾಗಿರುವ ಬಳಿಕ ಸ್ಯಾಂಡಲ್ ವುಡ್ ಸಿನೆಮಾಗಳ ಬಿಡುಗಡೆಯ ಭರಾಟೆ ಮುಂದುವರೆದಿದೆ. ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾದ ಪರಿಣಾಮ ಕಳೆದ ಆರು ತಿಂಗಳಲ್ಲಿ ನೂರು ಸಿನಿಮಾಗಳು ಅದೃಷ್ಟ ಪರೀಕ್ಷಿಸಿಕೊಂಡಿವೆ. ಈಗ ಮತ್ತಷ್ಟು ಚಿತ್ರಗಳು ಬಿಡುಗಡೆಗೆ ಮುಂದಾಗಿವೆ.
ಅದರಲ್ಲೂ ಇಂದು ಬರೋಬ್ಬರಿ 9 ಸಿನಿಮಾಗಳು ತೆರೆಕಾಣುವ ಮೂಲಕ ಚಿತ್ರಮಂದಿರಗಳು ರಂಗೇರಲಿದ್ದು, ಪ್ರೇಕ್ಷಕರನ್ನು ಯಾವ ಸಿನೆಮಾ ನೋಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಸಿವೆ.
“ವೆಡ್ಡಿಂಗ್ ಗಿಫ್ಟ್’, “ತೂತು ಮಡಿಕೆ’, “ಶುಗರ್‌ಲೆಸ್’, “ನಮ್ಮ ಹುಡುಗರು’, “ಗಿರ್ಕಿ’, “ಹೋಪ್’, “ಧೋನಿ’, “ಚೋಟಾ ಬಾಂಬೆ’, “ಅಂಗೈಲಿ ಅಕ್ಷರ’ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದ್ದು ಕೂತೂಹಲಕ್ಕೆ ಕಾರಣವಾಗಿದೆ.
ಈ ಒಂಭತ್ತು ಸಿನೆಮಾಗಳ ಪಟ್ಟಿಗೆ ಇನ್ನೊಂದು ಸಿನಿಮಾ ಸೇರಿಕೊಂಡರೂ ಸಂಖ್ಯೆ 10 ಆಗಲಿದ್ದು ಅದನ್ನು ಕಾದು ನೋಡಬೇಕಿದೆ.
ಜುಲೈ ಎರಡನೇ ವಾರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಿನಿಮಾ ಬಿಡುಗಡೆಯಾಗಲು ಕಾರಣವೇನು ಎಂದು ಕೇಳಬಹುದು. ಅದಕ್ಕೆ ಕಾರಣ ಜುಲೈ ಮೊದಲ ವಾರ ಹಾಗು ಜುಲೈ ಕೊನೆಯ ವಾರ! ಆಶ್ಚರ್ಯವಾದರೂ ಸತ್ಯ.
ಜುಲೈ ಮೊದಲನೇ ವಾರದಲ್ಲಿ ಶಿವರಾಜ್‌ಕುಮಾರ್ ಅವರ “ಬೈರಾಗಿ’ ಚಿತ್ರ ತೆರೆಕಂಡಿದ್ದರಿಂದ, ಆ ಚಿತ್ರದ ಜೊತೆ ಹೆಚ್ಚು ಚಿತ್ರಗಳು ತೆರೆಕಂಡಿಲ್ಲ. ಇನ್ನು, ಜುಲೈ ಕೊನೆಯ ವಾರದಲ್ಲಿ ಸುದೀಪ್ ನಟನೆಯ ಬಹುನಿರೀಕ್ಷಿತ “ವಿಕ್ರಾಂತ್ ರೋಣ’ ಚಿತ್ರ ತೆರೆ ಕಾಣುತ್ತಿರುವುದರಿಂದ ಆ ವಾರವೂ ಹೊಸಬರ ಸಿನಿಮಾ ಬಿಡುಗಡೆ ಕಷ್ಟ. ಈ ಎಲ್ಲಾ ಕಾರಣಗಳಿಂದಾಗಿ ಈ ವಾರ ಸಿನಿಮಾ ಬಿಡುಗಡೆಯ ಭರಾಟೆ ಜೋರಾಗಿದೆ.
ಬಿಡುಗಡೆಯಾಗುತ್ತಿರುವ 9 ಚಿತ್ರಗಳಲ್ಲಿ ಭಿನ್ನ-ವಿಭಿನ್ನ ಜಾನರ್‌ಗೆ ಸೇರಿದ, ಈಗಾಗಲೇ ಟ್ರೇಲರ್, ಟೀಸರ್ ಮೂಲಕ ಗಮನ ಸೆಳೆದ ಚಿತ್ರಗಳಿವೆ. “ವೆಡ್ಡಿಂಗ್ ಗಿಫ್ಟ್’ ಕೋರ್ಟ್ ರೂಂ ಡ್ರಾಮಾವಾದರೆ, “ತೂತು ಮಡಿಕೆ’ ಥ್ರಿಲ್ಲರ್ ಚಿತ್ರ. ಇನ್ನು, “ಶುಗರ್‌ಲೆಸ್’, “ಹೋಪ್’ ಕೂಡಾ ಹೊಸ ಬಗೆಯ ಕಂಟೆಂಟ್ ಹೊಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ವಾರ ಪ್ರೇಕ್ಷಕನಿಗೆ ಸಿನಿಮಾಗಳ ಆಯ್ಕೆಗೆ ಹೆಚ್ಚಿನ ಅವಕಾಶವಿದೆ.
ಚಂದ್ರ ಕೀರ್ತಿಯ ತೂತು ಮಡಿಕೆ :
ಮೂಕ ವಿಸ್ಮಿತ’, “ಸಿಲಿಕಾನ್ ಸಿಟಿ’, “ಕಿಸ್’ ಸಿನಿಮಾಗಳಲ್ಲಿ ಸಹನಟನಾಗಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ಈಗ “ತೂತು ಮಡಿಕೆ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಚಿತ್ರಕ್ಕೆ ಚಂದ್ರ ಕೀರ್ತಿ ಅವರೇ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಸಹಜವಾಗಿಯೇ ಈ ಸಿನಿಮಾ ಮೇಲೆ ಅವರ ನಿರೀಕ್ಷೆ ಹೆಚ್ಚಿದೆ. ಟ್ರೇಲರ್ ಹಿಟ್ ಆಗಿರುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಹೊಸಬರ ಹೊಸತನವನ್ನು ಪ್ರೋತ್ಸಾಹಿಸುವ ಪ್ರೇಕ್ಷಕ “ತೂತು ಮಡಿಕೆ’ಯನ್ನು ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಷ್ಟು “ಲೂಪ್ ಹೋಲ್ಸ್’ ಇದ್ದೇ ಇರುತ್ತದೆ. ಅಂಥ “ಲೂಪ್ ಹೋಲ್ಸ್’ ಮುಚ್ಚಿಕೊಂಡಾಗಲಷ್ಟೇ ಆತ ಏನಾದರೂ ಸಾಧಿಸಬಲ್ಲ, ದೊಡ್ಡವನಾಗಬಲ್ಲ. ನಮ್ಮ ನಡುವೆಯೇ ಇರುವಂಥ ಇಂಥ ಸ್ವಾರ್ಥ, ದುರಾಸೆ, ವ್ಯಾಮೋಹ ಮೊದಲಾದ “ಲೂಪ್ ಹೋಲ್ಸ್’ಗಳ ನಡುವಿನ ಕಥೆಯೇ “ತೂತು ಮಡಿಕೆ’. ಇದು ಪ್ರತಿಯೊಬ್ಬನಿಗೂ ಕನೆಕ್ಟ್ ಆಗುವಂಥ ವಿಷಯ. ಸಾದಾಸೀದಾ ವಿಷಯವನ್ನು ಇಟ್ಟುಕೊಂಡು ನೋಡುಗರಿಗೆ ಮನಮುಟ್ಟುವಂತೆ ತೆರೆಮೇಲೆ ಹೇಳುತ್ತಿದ್ದೇವೆ’ ಎನ್ನುವುದು “ತೂತು ಮಡಿಕೆ’ ಚಿತ್ರತಂಡದ ಮಾತು.
ಕಾಸಿನ ದುರಾಸೆಯಿಂದ ಅತ್ಯಮೂಲ್ಯ “ಆ್ಯಂಟಿಕ್ ಪೀಸ್’ ಒಂದರ ಹಿಂದೆ ಬೀಳುವ ಒಂದಷ್ಟು ಪಾತ್ರಗಳ ಸುತ್ತ ಏನೆಲ್ಲ ನಡೆಯುತ್ತದೆ. ಕೊನೆಗೆ ಈ “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದವರಿಗೆ ದಕ್ಕುತ್ತದೆಯಾ? ಇಲ್ಲವಾ? ಹೀಗೆ ಆ್ಯಂಟಿಕ್ ಪೀಸ್ ಹಿಂದೆ ಬಿದ್ದು ಪೀಸ್ (ಶಾಂತಿ) ಕಳೆದುಕೊಂಡವರ ಕಥೆ “ತೂತು ಮಡಿಕೆ’ಯಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ಚಂದ್ರ ಕೀರ್ತಿ.