732 ಎಕರೆ ಅರಣ್ಯದ ಮೇಲೆ ಬಿತ್ತು ಭೂಗಳ್ಳರಕಣ್ಣು….!
ಶಿರಾ ತಾಲೂಕಿನ ದಕ್ಷ ಮಹಿಳಾಅಧಿಕಾರಿಗಳಿಂದ ಬಹು ದೊಡ್ಡ ಹಗರಣ ಬಯಲು…!!
ಕೋಟ್ಯಂತರರೂ ಆಮಿಷಕ್ಕೂ ಜಗ್ಗದ ಶಿರಾ ತಹಸೀಲ್ದಾರ್…!
ಐದುನೂರು ಕೋಟಿ ರೂ ಗೂ ಅಧಿಕ ಮೌಲ್ಯದ ಭೂ ಕಬಳಿಕೆ ಸಂಚಿನ ಹಿಂದೆ ಪ್ರಭಾವಿಗಳ ಕರಿ ನೆರಳು…!!
ತುಮಕೂರು : ತುಮಕೂರು ಜಿಲ್ಲೆ ಶಿರಾ ತಾಲೂಕಿನ ಇತಿಹಾಸದಲ್ಲಿ ಬಹು ದೊಡ್ಡ ಹಗರಣವೊಂದು ನಡೆದು ಹೋಗಿದೆ. ನೂರಾರು ಕೋಟಿ ರೂ ಮೌಲ್ಯದ ಅರಣ್ಯ ನುಂಗಲು ಹೊಂಚು ಹಾಕಿದ್ದವರ ಬುಡಕ್ಕೆ ಬೆಂಕಿ ಬಿದ್ದಿದೆ. ಸುಳ್ಳು ಸರ್ಕಾರಿ ದಾಖಲೆಗಳನ್ನ ಸೃಷ್ಟಿಸಿ ಏಳುನೂರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶವನ್ನ ನುಂಗಲು ಪ್ರಯತ್ನಿಸಿದ್ದವರ ಹುನ್ನಾರ ಸದ್ಯಕ್ಕೆ ವಿಫಲಗೊಂಡಿದೆ. ಶಿರಾ ತಹಸೀಲ್ದಾರ್ ಶ್ರೀಮತಿ ಮಮತಾ ಹಾಗು ಶಿರಾ ವಲಯ ಅರಣ್ಯಧಿಕಾರಿಗಳಾಗಿದ್ದ ಶ್ರೀಮತಿ ರಾಧಾ ಶಿರಾ ತಾಲೂಕು ಕಂಡರಿಯದ ಬಹು ದೊಡ್ಡ ಹಗರಣವೊಂದನ್ನ ಬಯಲಿಗೆ ಎಳೆದಿದ್ದಾರೆ. ಹಣ ಎಂದರೆ ಹೆಣವೂ ಬಾಯಿ ಬಿಡುವ ಇಂಥ ಕಾಲಘಟ್ಟದಲ್ಲಿ ಕೋಟ್ಯಂತರ ರೂ ಆಮಿಷಕ್ಕೆ ಬಲಿಯಾಗದೆ ಐದು ನೂರು ಕೋಟಿ ರೂ ಗೂ ಅಧಿಕ ಅರಣ್ಯ ಭೂಮಿ ಉಳಿಸಿದ ಖ್ಯಾತಿ ಈ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸಂದಿದೆ.
ಏನೀಹಗರಣ…?
ರಾಷ್ಟ್ರೀಯ ಹೆದ್ದಾರಿ -4 (ಬೆಂಗಳೂರು TO ಪುಣೆ )ಶಿರಾ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಶೀಬಿ ನರಸಿಂಹ ಸ್ವಾಮಿ ದೇವಸ್ಥಾನದ ಸಮೀಪ ಹಾದು ಹೋಗಿದೆ. ದೇವಸ್ಥಾನದ ಬಳಿಯ ಹೆದ್ದಾರಿಯ ಎರಡೂ ಬದಿ ಸಮೃದ್ಧವಾಗಿ ಬೆಳೆದಿರುವ ಅರಣ್ಯ ಕಣ್ಣು ಕುಕ್ಕುವಂತಿದೆ. ಶೀಬಿ ಗ್ರಾಮದ ಸರ್ವೆ ನಂಬರ್ 59, 68, 69, 70,142, 143, 144, 146, 147 ಮತ್ತು 34 ನೇ ನಂಬರ್ ಗಳಲ್ಲಿನ ನೂರಾರು ಎಕರೆ ವಿಸ್ತೀರ್ಣ ಜಮೀನಿನಲ್ಲಿ ಅರಣ್ಯ ಸೊಂಪಾಗಿ ಬೆಳೆದಿದೆ. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿನ ಜಮೀನುಗಳ ಸದ್ಯದ ಮುಕ್ತ ಮಾರುಕಟ್ಟೆ ಬೆಲೆ ಎಕರೆವೊಂದಕ್ಕೆ 70 ರಿಂದ 80 ಲಕ್ಷ ರೂ…!! ತುಮಕೂರು -ಶಿರಾ ಮಧ್ಯೆ ತಲೆ ಎತ್ತಲಿರುವ ಕೈಗಾರಿಕ ಕಾರಿಡಾರ್, ದಾವಣಗೆರೆ – ತುಮಕೂರು ರೈಲ್ವೆ ಮಾರ್ಗ, ಹರಿದಾಡುತ್ತಿರುವ ಹೊಸ ವಿಮಾನ ನಿಲ್ದಾಣ ಸ್ಥಾಪನೆ, ಸನಿಹದಲ್ಲೇ ಇರುವ ವಸಂತಾನರಸಾಪುರ ಕೈಗಾರಿಕಾ ಪ್ರದೇಶ, ಇವೆಲ್ಲವೂ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ತಂದು ಕೊಟ್ಟಿವೆ. ಮುಂದಿನ ಹತ್ತು ಇಪ್ಪತ್ತು ವರ್ಷಗಳಲ್ಲಿ ಚಿನ್ನದ ಬೆಲೆಯನ್ನೂ ಮೀರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಕಾರಣದಿಂದಾಗಿಯೇ ಭೂ ಗಳ್ಳರ ಕಣ್ಣು ಮೇಲ್ಕಂಡ ಸರ್ವೆ ನಂಬರ್ ಗಳ ಜಮೀನಿನ ಮೇಲೆ ಬಿತ್ತು.
ಈಗಿರುವ ಕಾನೂನು ಅಂಶಗಳಲ್ಲಿ ಅರಣ್ಯ ಭೂಮಿ ಕಬಳಿಸುವುದು ಸುಲಭದ ಮಾತಲ್ಲ ಎನ್ನುವ ಅಂಶ ಸಂಚಿನ ಸೂತ್ರದಾರಿಗಳಿಗೆ ತಿಳಿಯದ ವಿಷಯವೇನಲ್ಲ. ಹಾಗಾಗಿಯೇ ಅವರು ರೈತರ ಹೆಸರಲ್ಲಿ ಜಮೀನು ಕಬಳಿಕೆಗೆ ದಾಖಲೆಗಳನ್ನ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದರು. ಇದೇ ವರ್ಷದ ಜನವರಿ 10 ನೇ ತಾರೀಕು (10-1-2022) ಶಿರಾ ನಗರದ ಕೆಲವು ಮಂದಿ, ಕಾಳಾಪುರ, ಕಳ್ಳೆ0ಬೆಳ್ಳ, ಶೀಬಿ ಅಗ್ರಹಾರ, ಹನುಮಂತ ನಗರ ವಾಸಿಗಳೆಂದು ಹೇಳಿಕೊಂಡ 10-15 ಮಂದಿ ಶಿರಾ ತಹಸೀಲ್ದಾರ್ ಕಚೇರಿಗೆ ಪವತಿವಾರಸು ಮೇರೆಗೆ ಖಾತೆ ಬದಲಾವಣೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರು. ಅವರು ಸಲ್ಲಿಸಿದ ಜಮೀನುಗಳು ಶೀಬಿ ಹಾಗು ಶೀಬಿ ಅಗ್ರಹಾರ ಗ್ರಾಮಕ್ಕೆ ಸಂಬಂಧಿಸಿದ್ದವು. ಆ ಅರ್ಜಿಗಳ ಬಹುತೇಕ ಅಂಶ ನಮ್ಮ ಪೂರ್ವಿಕರು 1948 -1954 ರ ಮಧ್ಯೆ ಸರ್ಕಾರಿ ಹರಾಜಿನಲ್ಲಿ ಜಮೀನು ಕೊಂಡಿದ್ದರು. ಆ ಜಮೀನುಗಳನ್ನ ಪೌತಿ ಖಾತೆ ಮಾಡಿ ಕೊಡಬೇಕೆಂಬುದು ಅವರ ಬೇಡಿಕೆ.
ವಿಚಿತ್ರ ಏನೆಂದರೆ, ಅವರು ಕೊಟ್ಟಿದ್ದ ಸರ್ವೆ ನಂಬರ್ ಗಳು ಶೀಬಿ ಅರಣ್ಯ ಪ್ರದೇಶಕ್ಕೆ ಸೇರಿದ್ದು ಅರಣ್ಯ ಇಲಾಖೆಯ ವಶದಲ್ಲಿ ಇದ್ದವು. 1948, 1949, 1950, 1954, 1956 ನೇ ವರ್ಷಗಳಲ್ಲಿ ಹರಾಜಿನಲ್ಲಿ ಕೊಂಡಿದ್ದ ಕೆಲವು ದಾಖಲೆಗಳ ನಕಲು ಪ್ರತಿಗಳನ್ನು ಅರ್ಜಿ ಜೊತೆಗೆ ಲಗತ್ತಿಸಲಾಗಿತ್ತು. ಅರ್ಜಿದಾರರು ಕೋರಿದ್ದ ಎಲ್ಲ ಸರ್ವೆ ನಂಬರ್ ಗಳ ಪಹಣಿ ದಾಖಲೆಗಳೂ ಅರಣ್ಯ ಪ್ರದೇಶವೆಂದೇ ಸಾರಿದ್ದವು. ಎಲ್ಲೂ ಯಾವುದೇ ರೈತನ ಹೆಸರು ಹುಡುಕಿದರೂ ಸಿಗದಂತ ಸ್ಥಿತಿ ಕಣ್ಣಿಗೆ ರಾಚುತ್ತಿತ್ತು. ಶಿರಾ ತಹಸೀಲ್ದಾರ್ ಶ್ರೀಮತಿ ಮಮತಾರವರು ನೂರಾರು ಎಕರೆ ಭೂಮಿ ಹರಾಜಿನಲ್ಲಿ ಕೊಂಡಿದ್ದರೂ 50-60 ವರ್ಷಗಳಿಂದ ಆ ಭೂಮಿ ಉಳುಮೆಯನ್ನೇ ಕಾಣದಿರುವುದು ಅನುಮಾನಗಳನ್ನು ಹುಟ್ಟಿ ಹಾಕಿತು. ಕೂಡಲೇ ಕಾರ್ಯ ತತ್ಪರರಾದ ತಹಸೀಲ್ದಾರ್ ಈ ಬಗೆಗಿನ ದಾಖಲೆಗಳ ಸತ್ಯಾಸತ್ಯತೆ ಗಳ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ ತಾಲೂಕು ಕಂಡರಿಯದ ಬಹು ದೊಡ್ಡ ಭೂ ಹಗರಣದ ವಾಸನೆ ಬಡಿಯಿತು. ಅರ್ಜಿದಾರರು ಸಲ್ಲಿಸಿದ್ದ ನಕಲು ಪ್ರತಿಗಳ ಮೂಲ ದಾಖಲೆಗಳ ಕಡತಗಳು ಶಿರಾ ಕಚೇರಿಯಲ್ಲಾಗಲಿ, ಮಧುಗಿರಿ, ತುಮಕೂರು ಕಚೇರಿಗಲ್ಲಾಗಲಿ ಸಿಗಲೇ ಇಲ್ಲಾ.
ಯಾವಾಗ ಶಿರಾ ತಹಸೀಲ್ದಾರ್ ರವರು ದಾಖಲೆಗಳ ನೈಜತೆ ಬಗ್ಗೆ ತನಿಖೆ ಕೈಗೊಂಡರೋ ಆಗಿನಿಂದ ಚಿತ್ರಣವೇ ಬದಲಾಯಿತು. ಅರ್ಜಿದಾರರ ಕೋರಿಕೆಯಂತೆ ಖಾತಾ ಬದಲಾವಣೆ ಮಾಡುವಂತೆ ದೂರವಾಣಿ ಕರೆಗಳು ಶಿರಾ ತಹಸೀಲ್ದಾರ್ ರವರಿಗೆ ಬರಲಾರಂಭಿಸಿದವು. ಆ ಕರೆಗಳನ್ನ ಮಾಡಿದವರು ಸಾಮಾನ್ಯ ಜನರಲ್ಲ..! ಅಸಾಮಾನ್ಯ ಜನ..!!
ಕರೆ ಮಾಡಿದವರ ಪಟ್ಟಿಯಲ್ಲಿ ನಿವೃತ್ತ IAS ಅಧಿಕಾರಿಗಳು, ನಿವೃತ್ತ IFS ಅಧಿಕಾರಿಗಳು, ಹಾಲಿ ಸರ್ಕಾರದ ಬೆಂಗಳೂರು ಮೂಲದ ಪ್ರಭಾವಿ ಶಾಸಕರ ಸಹೋದರ ಸೇರಿದಂತೆ ಘಟನುಗಟಿಗಳಿದ್ದಾರೆ..!! ಅದರ ಜೊತೆಗೆ ಖಾತಾ ಬದಲಾವಣೆ ಮಾಡಿಕೊಟ್ಟಲ್ಲಿ ಕೋಟ್ಯಂತರ ರೂ ನೀಡುವ ಆಮಿಷವೂ ನಡೆಯಿತು…
ಶಿರಾ ತಾಲ್ಲೂಕಿನ ಸುದೈವ, ಶಿರಾ ತಾಲೂಕಿನ ತಹಸೀಲ್ದಾರ್ ಮಮತಾ ಮೇಡಂ ಆಸೆ, ಆಮಿಷಗಳಿಗೆ ಬಗ್ಗದೆ, ಜಗ್ಗದೆ ದಿನಾಂಖ : 22-4-2022 ರಂದು ಎಲ್ಲ ಅರ್ಜಿದಾರರ ಅರ್ಜಿಗಳನ್ನು ಸೂಕ್ತ ದಾಖಲೆಗಳಿಲ್ಲದ ಕಾರಣಗಳಿಂದ ವಜಾ ಮಾಡಿದರು. ಹಣಕ್ಕಾಗಿ ಏನು ಬೇಕಾದರೂ ಮಾಡುವಂತ ದುರ್ದಿನಗಳಲ್ಲಿ ಐದುನೂರು ಕೋಟಿ ರೂ ಗಳಿಗೂ ಅಧಿಕ ಮೌಲ್ಯದ ನೂರಾರು ಎಕರೆ ಅರಣ್ಯ ಉಳಿಸಿದ ತಹಸೀಲ್ದಾರ್ ರವರ ಈ ಕಾರ್ಯ ಇಡೀ ರಾಜ್ಯ ಮೆಚ್ಚುವ ಕಾರ್ಯ..
ದುರಂತ ಏನೆಂದೆರೆ, ಕೋಟ್ಯಂತರ ರೂ ಮೌಲ್ಯದ ಅರಣ್ಯ ಉಳಿಸಿದ, ಪ್ರಭಾವಿಗಳ ಒತ್ತಡಕ್ಕೆ ಮಣಿಯದ, ಪ್ರಾಮಾಣಿಕ ಮನೋಭಾವದ ತಹಸೀಲ್ದಾರ್ ಕಾರ್ಯ ಸುದ್ದಿಯಾಗಲೇ ಇಲ್ಲ. ನಾಡೇ ಹೊಗಳುವಂತ ಮಾಡಿದ ಕೆಲಸವನ್ನ ಕನಿಷ್ಠ ಪ್ರಶಂಸೆ ಮಾಡುವ ಕಾರ್ಯ ನಡೆಯಲೇ ಇಲ್ಲ. ಬದಲಿಗೆ, ಅವರನ್ನ ಎತ್ತಂಗಡಿ ಮಾಡುವ ಕಾರ್ಯ ನಡೆಯುತ್ತಿದೆ ಅನ್ನುವ ಸುದ್ದಿ ತಾಲೂಕು ಕಚೇರಿಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಬೆಂಗಳೂರು ಮೂಲದ ಬಹು ದೊಡ್ಡ ಭೂ ಗಳ್ಳರ ಜಾಲವೊಂದು ತಹಸೀಲ್ದಾರ್ ವರ್ಗಾವಣೆ ಚಿತಾವಣೆಯ ಹಿಂದೆ ಇದೆ ಎನ್ನಲಾಗಿದೆ.
ಏನಾಗಿದೆ, ನಮ್ಮ ತಾಲ್ಲೂಕಿನ ಜನಪ್ರತಿನಿದಿಗಳಿಗೆ?ಏನಾಗಿದೆ ನಮ್ಮ ಸುದ್ದಿ ಮಾಧ್ಯಮ ಮಂದಿಗೆ? ಏನಾಗಿದೆ ಸಂಘಟನೆಗಳ ಮುಖ್ಯಸ್ಥರಿಗೆ…? ವೇದಿಕೆ ಮೇಲೆ ಬಣ್ಣ ಬಣ್ಣದ ಮಾತಾಡಿ ಸ್ವರ್ಗವನ್ನೇ ಭೂಮಿಗೆ ಇಳಿಸುವ ಮಾತಾಡೋ ಬೃಹಸ್ಪತಿಗಳು ಎಲ್ಲಿಗೆ ಹೋದರು…?
ಸಾಮಾನ್ಯ ಜನರ ಸಣ್ಣ ಪುಟ್ಟ ಕೆಲಸಗಳಿಗೂ ಜೇಬಿಗೆ ಕೈ ಹಾಕುವ ಭ್ರಷ್ಟ ಅಧಿಕಾರಿಗಳು, ನೌಕರರು ಇರುವಂತ ಈ ದಿನಮಾನಗಳಲ್ಲಿ ಅಪರೂಪದ ಪ್ರಾಮಾಣಿಕ ಮನಸ್ಥಿತಿ ಉಳ್ಳ ಓರ್ವ ಮಹಿಳಾ ಅಧಿಕಾರಿಗೆ ತಾಲ್ಲೂಕಿನಲ್ಲಿ ಮನ್ನಣೆ ದೊರೆಯಲಿ, ತಾಲೂಕು ಕಚೇರಿಯಲ್ಲಿ ಮದ್ಯವರ್ತಿಗಳನ್ನ ದೂರವಿಟ್ಟು ನೀತಿ, ನಿಯಮಗಳಿಗೆ ಒತ್ತು ಕೊಟ್ಟು ಬಡ ಬಗ್ಗರ ದೂರು, ದುಮ್ಮಾನಗಳಿಗೆ ಸ್ಪಂದಿಸುವ ತಹಸೀಲ್ದಾರ್ ಮಮತಾ ಮೇಡಂರವರನ್ನ ಇನ್ನಷ್ಟು ದಿನ ಈ ತಾಲ್ಲೂಕಿನಲ್ಲೇ ಮುಂದುವರೆಸುವ ದೊಡ್ಡತನವನ್ನ ಇಲ್ಲಿನ ಶಾಸಕರು, ಸಂಸದರು ಮಾಡಬೇಕಿದೆ. ಸರ್ಕಾರಿ ಭೂಮಿ ನುಂಗಿ ನೀರು ಕುಡಿಯಲು ಯತ್ನಿಸಿರೋ ಕಾಣದ ಕೈಗಳಿಗೆ ತಕ್ಕ ಶಾಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಲಿ.